ಮಡಿಕೇರಿ, ನ. ೧೯: ಕೊಡಗು ಜಿಲ್ಲೆಯು ಪ್ರವಾಹ ಪರಿಸ್ಥಿತಿ, ಪ್ರಕೃತಿ ವಿಕೋಪದಂತಹ ಕಾರಣದಿಂದಾಗಿ ಎದುರಿಸುತ್ತಿರುವ ಸಮಸ್ಯೆ - ಅಗತ್ಯೆಗಳ ಕುರಿತಾಗಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರ ಮೂಲಕ ನಡೆಸಿರುವ ಅಧ್ಯಯನ ವರದಿಯ ಕುರಿತಾಗಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸಲು ಕೋರಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಜಿ. ಪುಟ್ಟಸ್ವಾಮಿ ಅವರು ಸೂಚಿಸಿದ್ದಾರೆ. ಈ ಬಗ್ಗೆ ಅವರು ಲೋಕೋಪಯೋಗಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಕೊಡಗು ಜಿಲ್ಲೆಯು ಪ್ರವಾಹದಿಂದ ತತ್ತರಿಸಿದ್ದು, ಜಿಲ್ಲೆಯ ಕೆಲವಾರು ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಸಾವು - ನೋವುಗಳು ಸಂಭವಿಸಿದೆ. ಮನೆಗಳು ಕೃಷಿಭೂಮಿ ಹಾಗೂ ಇತರೆ ಮೂಲಭೂತ ಸೌಲಭ್ಯದಿಂದ ಜಿಲ್ಲೆಯ ಜನರು ವಂಚಿತರಾಗಿರುತ್ತಾರೆ ಹಾಗೂ ರಸ್ತೆಗಳು ದುರಸ್ತಿಗೀಡಾಗಿವೆ. ಈ ಬಗ್ಗೆ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರಾದ ಬಿ.ವಿ. ಆನಂದ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿ ಕೆಲವೊಂದು ಅಧ್ಯಯನ ನಡೆಸಿ ವರದಿಯನ್ನು ಸಿದ್ದಪಡಿಸಿ ಸಲ್ಲಿಸಿದ್ದಾರೆ. ಸದರಿ ವರದಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಅಗತ್ಯಕ್ರಮ ಕೈಗೊಂಡು ಹಾಗೂ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಆಯೋಗದ ಉಪಾಧ್ಯಕ್ಷರಾಗಿರುವ ಬಿ.ಜಿ. ಪುಟ್ಟಸ್ವಾಮಿ ಅವರು ಲೋಕೋಪಯೋಗಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿ ನೀಡಿದ್ದಾರೆ. ಈ ಕುರಿತಾಗಿ ಅವರು ತಾ. ೧೬ ರಂದು ಪತ್ರ ರವಾನಿಸಿದ್ದಾರೆ.