ಮಡಿಕೇರಿ, ನ. ೧೭: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಕೋಮು ಪ್ರಚೋದನೆಯ ಪ್ರಕರಣಗಳಲ್ಲಿ ಅಮಾಯಕ ಯುವಕರು ಬಲಿಪಶುಗಳಾಗುತ್ತಿದ್ದು, ನಿತ್ಯ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬೇಸರದ ಬೆಳವಣಿಗೆಯಾಗಿದ್ದು, ಶಾಸಕರು ಮಧ್ಯ ಪ್ರವೇಶಿಸುವ ಮೂಲಕ ಸಮಾಜದಲ್ಲಿ ಶಾಂತಿ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ. ಯಾಕುಬ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾವಣೆಗಳು ಸಮೀಪಿಸಿದಾಗಲೆಲ್ಲ ಜಿಲ್ಲೆಯಲ್ಲಿ ಕೋಮು ಭಾವನೆ ಕೆರಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಖಂಡನೀಯ ಎಂದಿದ್ದಾರೆ.
ರಾಜಕೀಯ ದುರುದ್ದೇಶಕ್ಕೆ ಅಮಾಯಕ ಯುವಕರ ಹಾದಿ ತಪ್ಪಿಸಲಾಗುತ್ತಿದೆ. ಪೊಲೀಸ್ ಪ್ರಕರಣ ಎದುರಿಸಲಾಗದೆ ಬಡಕುಟುಂಬಗಳು ಆತಂಕದಲ್ಲೇ ದಿನ ದೂಡುತ್ತಿವೆ. ಶನಿವಾರಸಂತೆ, ಗರಗಂದೂರು, ಮಾದಾಪುರ ಭಾಗದಲ್ಲಿ ನಿರಂತರವಾಗಿ ಗುಂಪು ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಸ್ಥಿತಿ ಕೈಮೀರುವ ಮೊದಲು ಕಾನೂನು ಬಿಗಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಎಲ್ಲಾ ಜಾತಿ, ಧರ್ಮದವರು ಶಾಂತಿ, ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ರಾಜಕೀಯ ಲಾಭಕ್ಕಾಗಿ ಕೆಲವರು ಕಲಹವನ್ನು ಸೃಷ್ಟಿಸಿ ಅಶಾಂತಿ ಮೂಡಿಸುತ್ತಿದ್ದಾರೆ. ಈ ಬೆಳವಣಿಗೆ ಅಮಾಯಕ ಯುವ ಸಮೂಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಯುವಕರು ಕಾನೂನು, ಸುವ್ಯವಸ್ಥೆಯ ಬಗ್ಗೆ ಎಚ್ಚೆತ್ತುಕೊಂಡು ತಮ್ಮನ್ನೇ ನಂಬಿರುವ ಕುಟುಂಬದ ಸದಸ್ಯರ ಬಗ್ಗೆ ಕಾಳಜಿ ವಹಿಸಿ ಗಲಭೆಗಳಿಂದ ದೂರ ಉಳಿಯಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಕೆಲವು ಭಾಗಗಳಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದ್ದು, ಶಾಸಕರು ಸೌಹಾರ್ದತೆಯ ಸಭೆಯೊಂದನ್ನು ನಡೆಸಿ ಸಾಮರಸ್ಯದ ಜೀವನಕ್ಕೆ ಸಂದೇಶ ನೀಡಬೇಕೆಂದು ಯಾಕುಬ್ ಒತ್ತಾಯಿಸಿದ್ದಾರೆ.