ಮಡಿಕೇರಿ, ನ. ೧೬: ಕೊಡಗು ಮೂಲನಿವಾಸಿಗಳು, ಜಮ್ಮಾ ಹಿಡುವಳಿದಾರರಿಗೆ ದತ್ತವಾದ ಬಂದೂಕು ಪರವಾನಗಿಯಿಂದ ವಿನಾಯಿತಿ ಸವಲತ್ತು ಕುರಿತಂತೆ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಪ್ರಕರಣದ ಬಗ್ಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ಸಂಬAಧ ಗೌಡ ಸಮುದಾಯದ ಸ್ಪಷ್ಟ ಅಭಿಪ್ರಾಯದ ಬಗ್ಗೆ ಅರ್ಜಿದಾರ ಕ್ಯಾಪ್ಟನ್ ವೈ.ಕೆ. ಚೇತನ್ ಅವರಿಗೆ ಪತ್ರದ ಮೂಲಕ ತಿಳಿಯಪಡಿಸಿದೆ.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ಕಳುಹಿಸಿರುವ ಪತ್ರದಲ್ಲಿನ ವಿವರ ಇಂತಿದೆ; ಕೊಡಗಿನ ಜನತೆಗೆ ಬ್ರಿಟಿಷರಿಂದ ದತ್ತವಾದ ಬಂದೂಕು ಲೈಸನ್ಸ್ ವಿನಾಯಿತಿ ಪತ್ರದ ಸವಲತ್ತು ಇಂದಿಗೂ ಮುಂದುವರೆದು ಜನತೆಗೆ ಲಭ್ಯವಾಗುತ್ತಿರುವುದು ಅಸಂವಿಧಾನಿಕ ಎಂದು ಈ ಸವಲತ್ತನ್ನು ವಜಾಗೊಳಿಸುವಂತೆ ಆದೇಶಿಸಲು ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ನೀವುಗಳು ೨೦೧೫ರಿಂದ ೩ ರಿಟ್ ಅರ್ಜಿಗಳನ್ನು ದಾಖಲಿಸಿರುತ್ತೀರಿ.
ನೀವು ದಾಖಲಿಸಿದ ರಿಟ್ ಅರ್ಜಿಗಳಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟ ಮಧ್ಯಪ್ರವೇಶಿಸಿ ಬಂದೂಕು ವಿನಾಯಿತಿ ಸವಲತ್ತು ನೀಡುವಾಗ ಸರಕಾರವು ಗೌಡ ಜನಾಂಗವನ್ನು ಜಾತಿ ಆಧಾರದಲ್ಲಿ ಪರಿಗಣಿಸಬೇಕು ಎಂದು ವಾದ ಮಂಡಿಸಲು ಕ್ರಮಕೈಗೊಳ್ಳಲಾಗಿತ್ತು.
ನೀವು ದಾಖಲಿಸಿದ ೩ ರಿಟ್ ಅರ್ಜಿಗಳಲ್ಲಿ ನೀವು ನಿಮ್ಮ ವೈಯಕ್ತಿಕ ವಾದದ ಅಂಶಗಳನ್ನು ಮಂಡಿಸಿ ಮೇಲೆ ಹೇಳಲಾದ ಸವಲತ್ತು ಶಾಶ್ವತವಾಗಿ ವಜಾಗೊಳ್ಳಬೇಕು ಎಂದು ವಾದ ಮಂಡಿಸಿದ್ದೀರಿ. ಈ ನಿಮ್ಮ ವಾದವು ಗೌಡ ಜನಾಂಗ ಸೇರಿದಂತೆ ಕೊಡಗಿನ ಎಲ್ಲಾ ಜನಾಂಗಗಳಿಗೆ ಶತಮಾನದಿಂದ ದತ್ತವಾದ ಸವಲತ್ತು ವಜಾಗೊಳ್ಳಬೇಕು ಎಂದು ಆಗಿರುವ ಕಾರಣ ಕೊಡಗಿನ ಗೌಡ ಜನಾಂಗಕ್ಕೆ ಇದು ಸಮ್ಮತಿ ಇರುವುದಿಲ್ಲ ಎಂದು ನಿಮಗೆ ಹಲವು ರೂಪದಲ್ಲಿ ಮೌಖಿಕವಾಗಿ ಅರ್ಥೈಸಲಾಗಿತ್ತು.
ಈ ನಿಮ್ಮ ರಿಟ್ ಅರ್ಜಿಗಳ ಬಗ್ಗೆ ಕೊಡಗಿನ ಗೌಡ ಜನತೆಯ ಅಭಿಪ್ರಾಯ ಸಂಗ್ರಹಿಸಿ ಒಂದು ಒಮ್ಮತದ ತೀರ್ಮಾನಕ್ಕೆ ಮುಂದಡಿ ಇಡಲು ದಿನಾಂಕ: ೩೧.೧೦.೨೦೨೧ ರಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಕೊಡಗಿನ ಎಲ್ಲಾ ಗೌಡ ಸಮಾಜ, ಸಂಘಟನೆಗಳ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ನಿಮ್ಮ ಪತ್ರದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟವು ‘ಅಡ್ಡಗೋಡೆಯ ಮೇಲೆ ಕುಳಿತಿದೆ’ ಎಂಬ
(ಮೊದಲ ಪುಟದಿಂದ) ಅವಹೇಳನದ ಶಬ್ದವನ್ನು ಉಲ್ಲೇಖಿಸಲಾಗಿದೆ.
ದಿನಾಂಕ: ೩೧.೧೦.೨೦೨೧ ರಂದು ಕೊಡಗು ಗೌಡ ಸಮಾಜಗಳ ಒಕ್ಕೂಟವು ಆಯೋಜಿಸಿದ್ದ ಕೊಡಗು ಗೌಡ ಸಮಾಜಗಳ, ಗೌಡ ಸಂಘಟನೆಗಳ ಸಭೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪ್ರತಿನಿಧಿಗಳು ಹಾಜರಿದ್ದು, ಕೂಲಂಕುಷವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದರು.
ಅಂತಿಮವಾಗಿ ಎಲ್ಲಾ ಸಮಾಜ, ಸಂಘಟನೆಗಳ ಅಭಿಪ್ರಾಯ ಕ್ರೋಢೀಕರಿಸಲಾಗಿದೆ. ಹಾಗೆಯೇ ಸಮಸ್ತ ಕೊಡಗಿನ ಜನತೆಯ ಶ್ರೇಯೋಭಿವೃದ್ಧಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈಗಾಗಲೇ ನೀವು ನ್ಯಾಯಾಲಯದಲ್ಲಿ ಹೂಡಿದ್ದ ರಿಟ್ ಅರ್ಜಿಗಳ ವಾದದ ಅಂಶಗಳನ್ನು ಮುಂದುವರೆಸಿ ಈ ಪ್ರಕರಣವನ್ನು ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಕೊಂಡೊಯ್ಯದೇ ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸುವುದು, ಇದು ಸಮಸ್ತ ಗೌಡ ಜನಾಂಗದ ಅಭಿಪ್ರಾಯ ಆಗಿರುವುದರಿಂದ ಇದನ್ನು ಮೀರಿ ನೀವು ನಿಮ್ಮ ಇಚ್ಛಾನುಸಾರ ಮುಂದುವರೆದಲ್ಲಿ ಈ ನಿಮ್ಮ ವಾದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಬೆಂಬಲವಿರುವುದಿಲ್ಲವೆAದು ಸ್ಪಷ್ಟಪಡಿಸಲಾಗಿದೆ.
ಈ ವಿಷಯದಲ್ಲಿ ಕೊಡಗಿನ ಗೌಡರ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟ ಶೀಘ್ರ ಕೈಗೊಳ್ಳಲಿದೆ ಎಂದು ತಿಳಿಯಪಡಿಸಲಾಗಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗೌಡ ಸಮುದಾಯದ ನಡೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.