ಸೋಮವಾರಪೇಟೆ, ನ. ೧೬: ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ ಗ್ರಾಮದಲ್ಲಿರುವ ಕಾಫಿ ಪಲ್ಪಿಂಗ್ ಘಟಕದಿಂದ ಹೊಳೆಗೆ ತ್ಯಾಜ್ಯದ ನೀರು ಹರಿಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೊನ್ನವಳ್ಳಿ ಗ್ರಾಮದಲ್ಲಿರುವ ಪಲ್ಪಿಂಗ್ ಘಟಕದಿಂದ ಹೊರಬರುವ ತ್ಯಾಜ್ಯದ ನೀರು ನೇರವಾಗಿ ಹೊನ್ನವಳ್ಳಿ ಹೊಳೆಗೆ ಸೇರುತ್ತಿದ್ದು, ಇದು ಅಜ್ಜಳ್ಳಿ, ಶನಿವಾರಸಂತೆ ಮೂಲಕ ಗೊರೂರು ಜಲಾಶಯಕ್ಕೆ ಹರಿಯುತ್ತಿದೆ.

ಈ ಹೊಳೆಯ ನೀರನ್ನು ಜಾನುವಾರುಗಳು ಕುಡಿಯಲು ಹಾಗೂ ರೈತರು ಕೃಷಿಗೆ ಬಳಸಿಕೊಳ್ಳುತ್ತಿದ್ದು, ಕಾಫಿ ಪಲ್ಪಿಂಗ್ ತ್ಯಾಜ್ಯದಿಂದ ನೀರು ಕಲುಷಿತ ಗೊಳ್ಳುತ್ತಿದೆ ಎಂದು ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆರೋಪಿಸಿದ್ದರು.

ಈ ಹಿನ್ನೆಲೆ ಇಲಾಖೆಯ ಪ್ರಭಾರ ಪರಿಸರ ಅಧಿಕಾರಿ ಡಾ. ಎಂ.ಆರ್. ಸುಧಾ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೊನ್ನವಳ್ಳಿ, ಕೂಗೇಕೋಡಿ ವ್ಯಾಪ್ತಿಯಲ್ಲಿರುವ ಕಾಫಿ ಪಲ್ಪಿಂಗ್ ಘಟಕಗಳನ್ನು ಪರಿಶೀಲಿಸಿದ ಸಂದರ್ಭ ಹೊನ್ನವಳ್ಳಿಯಲ್ಲಿರುವ ಕೂಗೇಕೋಡಿ ಗ್ರಾಮದ ಚಂದ್ರಶೇಖರ್ ಅವರಿಗೆ ಸೇರಿದ ಘಟಕದಿಂದ ಕಾಫಿ ತ್ಯಾಜ್ಯ ಹೊಳೆಗೆ ಸೇರುತ್ತಿರುವುದು ಕಂಡುಬAತು.

ಈ ಸಂದರ್ಭ ಘಟಕದ ಮಾಲೀಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಡಾ. ಸುಧಾ ಅವರು, ತಕ್ಷಣ ಕಾಫಿ ತ್ಯಾಜ್ಯವನ್ನು ತೆರವುಗೊಳಿ ಸಬೇಕು. ಕಲುಷಿತ ನೀರು ಜಲಮೂಲಕ್ಕೆ ಸೇರದಂತೆ ಕ್ರಮ ವಹಿಸ ಬೇಕು. ತಪ್ಪಿದಲ್ಲಿ ಘಟಕದ ಪರವಾನಗಿ ಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಘಟಕದಿಂದ ಪ್ರತಿ ವರ್ಷವೂ ಕಾಫಿ ಪಲ್ಪಿಂಗ್ ತ್ಯಾಜ್ಯದ ನೀರು ಹೊಳೆ ಸೇರುತ್ತಿದೆ. ಇದರಿಂದಾಗಿ ಜಲಮೂಲ ಗಳೂ ಹಾಳಾಗುತ್ತಿವೆ. ಈ ಹಿನ್ನೆಲೆ ಘಟಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.

ಈ ಸಂದರ್ಭ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಗೌಡಳ್ಳಿ ಗ್ರಾ.ಪಂ. ಸದಸ್ಯ ಅಜ್ಜಳ್ಳಿ ನವೀನ್, ದೊಡ್ಡಮಳ್ತೆ ಗ್ರಾ.ಪಂ. ಬಿಲ್ ಕಲೆಕ್ಟರ್ ವಿಶ್ವರೂಪಾಚಾರ್ಯ, ಸ್ಥಳೀಯರಾದ ಮಧುಸೂದನ್ ಸೇರಿದಂತೆ ಇತರರು ಹಾಜರಿದ್ದರು.