*ಗೋಣಿಕೊಪ್ಪ, ನ. ೧೬: ನೆರಮನೆಯ ಗೆಳತಿಯ ಸಮಯ ಪ್ರಜ್ಞೆಯಿಂದ ಗರ್ಭಿಣಿ ಮಹಿಳೆ, ಎರಡು ಗಂಡು ಮಗು ಸೇರಿದಂತೆ ಮೂರು ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ.

ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದ ನೆರೆಮನೆಯ ತುಂಬು ಗರ್ಭಿಣಿ ಮಹಿಳೆ ನೋವಿನಿಂದ ಒದ್ದಾಡುತ್ತಿದ್ದಾಗ ವಿಷಯ ತಿಳಿದು ಸಮಯಕ್ಕೆ ಆಗಮಿಸಿದ ಮಲ್ಚಿರ ಯಶೋಧ ದೇವಯ್ಯ ಅವರು ಮಹಿಳೆಗೆ ಹೆರಿಗೆ ಮಾಡಿಸಿ ತಾಯಿ ಮತ್ತು ಅವಳಿ ಮಗುವಿನ ಜೀವವನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಗೋಣಿಕೊಪ್ಪ ವಿಜಯನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರಂಜಿತ್ ಎಂಬುವವರ ಪತ್ನಿ ಶೋಭಿತ ನೆರಮನೆಯಲ್ಲಿ ವಾಸಿಸುತ್ತಿದ್ದ ಗೆಳತಿಯ ಸಮಯ ಪ್ರಜ್ಞೆಯಿಂದ ಅವಳಿ ಕಂದಮ್ಮಗಳಿಗೆ ಜೀವ ನೀಡಿದ್ದಾರೆ.

ಘಟನೆಯ ವಿವರ: ಗೋಣಿಕೊಪ್ಪದ ವಿಜಯನಗರ ಬಡಾವಣೆಯಲ್ಲಿ ಕೆಲ ತಿಂಗಳುಗಳಿAದ ಬಾಡಿಗೆ ಮನೆಯಲ್ಲಿ ರಂಜು ಅವರ ಕುಟುಂಬ ವಾಸವಾಗಿತ್ತು. ರಂಜು ಪತ್ನಿ ತುಂಬು ಗರ್ಭಿಣಿಯಾಗಿದ್ದಳು. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಹೆರಿಗೆಯಾಗುವ ಸಮಯ ಕೂಡಿಬರದಿದ್ದರೂ ಆಕಸ್ಮಿಕವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪತಿ ಕೆಲಸಕ್ಕೆ ತೆರಳಿದ್ದರಿಂದ ಮನೆಯಲ್ಲಿ ಏಕಾಂಗಿಯಾಗಿದ್ದ ಶೋಭಿತ ಅಸಹಾಯಕಳಾಗಿದ್ದಾಳೆ. ಹೊಟ್ಟೆ ನೋವಿನ ತೀವ್ರತೆಗೆ ಕಿರುಚಿಕೊಂಡ ಆಕೆಯ ಧ್ವನಿ ನೆರೆ ಮನೆಯವರಿಗೆ ಕೇಳಿಸಿದ ಕಾರಣ ತಕ್ಷಣ ಕಾರ್ಯಪ್ರವೃತ್ತರಾಗಲು ಸಾಧ್ಯವಾಗಿದೆ.

ಯಶೋಧ ಅವರು ಸ್ಥಳಕ್ಕೆ ತಲುಪುವ ಮೊದಲೇ ಒಂದು ಗಂಡು ಮಗುವಿಗೆ ಜನ್ಮ ನೀಡಿದ ಶೋಭಿತ ಅವರು ನೋವಿನಿಂದ ನರಳುತ್ತಿದ್ದರು. ಸಮಯಕ್ಕೆ ಆಗಮಿಸಿದ ನೆರೆಮನೆಯ ಗೆಳತಿ ಎದುರಾಗಲಿರುವ ಅಪಾಯವನ್ನು ಅರಿತು ಸೂಲಗಿತ್ತಿಯಾಗಿ ಮಾರ್ಪಟ್ಟು ಸ್ಥಳೀಯ ಕಿರಿಯ ಆರೋಗ್ಯ ಮಹಿಳಾ ಸಹಾಯಕರು ಮತ್ತು ಆಶಾ ಕಾರ್ಯಕರ್ತರ ನೆರವಿನೊಂದಿಗೆ ಹೆರಿಗೆ ಮಾಡಿಸಲು ಕಾರಣರಾಗಿದ್ದಾರೆ. ನಂತರ ಮಹಿಳೆ ಮತ್ತೊಂದು ಗಂಡು ಮಗುವಿಗೂ ಜನ್ಮ ನೀಡಿದ್ದಾಳೆ.

ತಾಯಿ ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಆಸ್ಪತ್ರೆ ಮೂಲಗಳ ಪ್ರಕಾರ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಮೂರು ಜೀವ ಉಳಿಸುವಲ್ಲಿ ಸಫಲತೆಯನ್ನು ಕಂಡುಕೊAಡ ಯಶೋಧ ದೇವಯ್ಯ ಅವರು ಮಲ್ಚಿರ ಗಾಂಧಿ ದೇವಯ್ಯ ಅವರ ಪತ್ನಿ.

-ಎನ್.ಎನ್. ದಿನೇಶ್