ಸುಂಟಿಕೊಪ್ಪ, ನ. ೧೬ : ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಗದ್ದೆಹಳ್ಳದಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವಸತಿಗೃಹ, ನ್ಯಾಯಬೆಲೆ ಅಂಗಡಿ ಹಾಗೂ ಅಂಚೆ ಕಚೇರಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆ-ಗಾಳಿಗೆ ಕುಸಿದು ಬಿದ್ದರೆ ಅಚ್ಚರಿ ಪಡಬೇಕಿಲ್ಲ.
ಗದ್ದೆಹಳ್ಳದ ಗಾಂಧಿ ವೃತ್ತದಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆ ಬದಿಯಲ್ಲಿ ಸರಕಾರಿ ವಸತಿಗೃಹ, ಅಂಗನವಾಡಿ ಕೇಂದ್ರ, ಅಂಚೆ ಕಚೇರಿ ಹಾಗೂ ಕೆಲ ನಿವಾಸಿಗಳ ತೀರಾ ಇಕ್ಕಟ್ಟಾದ ಮನೆಗಳಿವೆ, ಅಂಗನವಾಡಿ ಕೇಂದ್ರವನ್ನು ಪ್ರತಿ ವರ್ಷ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಿಂದ ದುರಸ್ತಿಗೊಳಿಸಿದರೂ ಮಳೆ ಗಾಳಿಗೆ ಅದು ಬಿರುಕು ಬಿಟ್ಟಿದೆ. ಅಂಗನವಾಡಿ ಕೇಂದ್ರದ ಶಿಕ್ಷಕಿ, ಸಹಾಯಕಿಯರಲ್ಲಿ ಪುಟಾಣಿ ಮಕ್ಕಳ ಜೀವಭಯದಲ್ಲಿ ಕಾಲ ದೂಡುವಂತಾಗಿದೆ. ಈ ಕಟ್ಟಡದ ಹಿಂಭಾಗದಲ್ಲಿ ಬರೆಯೂ ಜರಿಯುವ ಹಂತದಲ್ಲಿದೆ. ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ವಸತಿಗೃಹ, ನ್ಯಾಯಬೆಲೆ ಅಂಗಡಿ, ದನದ ದೊಡ್ಡಿಯ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದೆ. ಇಲ್ಲಿ ನೆಲೆಸಿರುವವರು ಮಳೆ, ಗಾಳಿಗೆ ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಾಗಿದೆ.
ಈ ಕಟ್ಟಡಗಳ ಹಿಂಭಾಗದಲ್ಲಿ ಇದ್ದ ಕಾಫಿ ತೋಟವನ್ನು ತೆರವುಗೊಳಿಸಿ ಆ ಜಾಗವನ್ನು ಭೂಪರಿವರ್ತನೆ ಮಾಡಿ ಬಡಾವಣೆ ನಿರ್ಮಿಸುವಾಗ ಮಣ್ಣು ತೆರವುಗೊಳಿಸುವ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಿರುವುದರಿಂದ ಈ ಮನೆಗಳಿಗೆ ಕಟ್ಟಡಗಳಿಗೆ ಹಾನಿಯಾಗಲು ಕಾರಣವಾಗಿದೆ. ಈಗ ಮಳೆಯು ಹೆಚ್ಚಾಗಿದ್ದು, ಅಪಾಯದ ಅಂಚಿನಲ್ಲಿ ಬರೆ ಮೇಲೆ ನಿಂತಿರುವ ಈ ಕಟ್ಟಡಗಳೂ ನೆಲಕಚ್ಚುವ ಭೀತಿ ಇಲ್ಲಿನ ನಿವಾಸಿಗಳಿಗೆ ಆವರಿಸಿದೆ.
ಕ್ರಮಕ್ಕೆ ಆಗ್ರಹ : ಗ್ರಾಮ ಪಂಚಾಯಿತಿಯವರು ಶಿಥಿಲಾವಸ್ಥೆಯಲ್ಲಿರುವ ಪೌರಕಾರ್ಮಿಕರ ವಸತಿ ಗೃಹ, ಅಂಗನವಾಡಿ ಕಟ್ಟಡ, ನ್ಯಾಯಬೆಲೆ ಅಂಗಡಿ ಕಟ್ಟಡವನ್ನು ದುರಸ್ತಿಪಡಿಸಲು ಮುಂದಾಗಬೇಕು; ಕಟ್ಟಡದ ಹಿಂಭಾಗದಲ್ಲಿ ನಿರ್ಮಾಣಗೊಂಡಿರುವ ಬರೆಗೆ ಸೂಕ್ತವಾದ ತಡೆಗೋಡೆಯನ್ನು ನಿರ್ಮಿಸುವ ಮೂಲಕ ಮುಂದಾಗುವ ಪ್ರಾಣಹಾನಿ, ಅನಾಹುತವನ್ನು ತಪ್ಪಿಸಲು ಮುಂದಾಗುವAತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಅನಾಹುತ ಸಂಭವಿಸುವ ಮುನ್ನ ಗ್ರಾಮ ಪಂಚಾಯಿತಿಯವರು ಈ ಕಟ್ಟಡದ ಪುನರ್‌ನಿರ್ಮಾಣ, ಹಿಂಬದಿಗೆ ತಡೆಗೋಡೆ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.