ಸೋಮವಾರಪೇಟೆ, ನ.೧೫: ಸುಂಟಿಕೊಪ್ಪ ಗ್ರಾಮದ ಜಯರಾಂ ಎಂಬವರ ವಾಸದ ಮನೆಯೊಳಗೆ ಎರಡು ಪಕ್ಷಿಗಳು ಗೂಡು ಕಟ್ಟಿಕೊಂಡು ಸಂಸಾರ ಸಾಗಿಸುತ್ತಿದ್ದು, ಅಕ್ಕಪಕ್ಕದವರ ಆಕರ್ಷಣೆಗೆ ಕಾರಣವಾಗಿದೆ.
ಜಯರಾಂ ಅವರ ವಾಸದ ಮನೆ ಮುಂಭಾಗದ ಕೊಠಡಿಯ ಗೋಡೆಯಲ್ಲಿ ಮಣ್ಣಿನಿಂದ ಗೂಡು ನಿರ್ಮಿಸಿಕೊಂಡಿರುವ ಎರಡು ಪಕ್ಷಿಗಳು ಯಾರ ಭಯವೂ ಇಲ್ಲದಂತೆ ಜೀವನ ನಡೆಸುತ್ತಿವೆ. ಮನೆಯ ಬಾಗಿಲು, ಕಿಟಕಿಗಳನ್ನು ತೆರೆದರೆ ಹೊರಹೋಗಿ ಆಹಾರ ಅರಸಿ ನಂತರ ವಾಪಸ್ ಆಗುತ್ತಿವೆ.
ಬಾಗಿಲು ಹಾಕಿದ ಸಂದರ್ಭ ಗಾಳಿ-ಬೆಳಕಿಗೆ ನಿರ್ಮಿಸಿರುವ ಸಣ್ಣ ರಂದ್ರಗಳ ಮೂಲಕ ಪಕ್ಷಿಗಳು ತೆರಳುತ್ತಿದ್ದು, ನಾವುಗಳೂ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಪಕ್ಷಿಗಳು ನಮ್ಮ ಮನೆಯ ಸದಸ್ಯರಂತೆ ಆಗಿವೆ ಎಂದು ಜಯರಾಂ ಅಭಿಪ್ರಾಯಿಸಿದ್ದಾರೆ.