ಮಡಿಕೇರಿ, ನ. ೧೬: ಜಿಲ್ಲೆಯಲ್ಲಿ ಪ್ರತಿ ಬುಧವಾರ ಮತ್ತು ಶುಕ್ರವಾರದಂದು ಕೋವಿಡ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಒಂದನೇ ವರಸೆ ಹಾಗೂ ಎರಡನೇ ವರಸೆಯ ಲಸಿಕೆಯನ್ನು ಪಡೆಯದೇ ಇರುವ ಸಾರ್ವಜನಿಕರು ಲಸಿಕಾ ಮೇಳದಲ್ಲಿ ಕೋವಿಡ್ ಲಸಿಕೆ ಪಡೆಯಬಹುದಾಗಿರುತ್ತದೆ.

ಜಿಲ್ಲೆಗೆ ಕಾಫಿ ಕೊಯ್ಲು ಮಾಡಲು ಹಾಗೂ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಲು ಅಸ್ಸಾಂ ಹಾಗೂ ಇತರ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಬರುತ್ತಿದ್ದು, ತೋಟ ಮಾಲೀಕರು/ ವ್ಯವಸ್ಥಾಪಕರು/ ಗುತ್ತಿಗೆದಾರರು ತಮ್ಮ ಕುಟುಂಬ ಹಾಗೂ ತೋಟ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಎಲ್ಲರ ಸುರಕ್ಷತಾ ಹಿತದೃಷ್ಟಿಯಿಂದ ತಮ್ಮ ತೋಟಗಳಿಗೆ ಬರುವ ಕಾರ್ಮಿಕರು ಎರಡೂ ವರಸೆಯ ಲಸಿಕೆಯನ್ನು ಪಡೆದಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಜಿಲ್ಲಾಡಳಿತ ಕೋರಿದೆ. ಒಂದು ವೇಳೆ ಕಾರ್ಮಿಕರು ಲಸಿಕೆಯನ್ನು ಪಡೆಯದೇ ಇದ್ದಲ್ಲಿ ತಮ್ಮ ಸಮೀಪದ ಲಸಿಕಾ ಶಿಬಿರದಿಂದ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.