ಕೂಡಿಗೆ, ನ. ೧೬: ಕಳೆದ ಹತ್ತು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆ ನೆಲಕಚ್ಚಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಭುವನಗಿರಿ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಮದಲಾಪುರ, ಹುದುಗೂರು ವ್ಯಾಪ್ತಿಯಲ್ಲಿ ಈಗಾಗಲೇ ಕೆಲವು ಪ್ರದೇಶದಲ್ಲಿ ಬೆಳೆಯು ಕುಯ್ಲು ಹಂತಕ್ಕೆ ತಲುಪಿದ್ದು, ಭತ್ತ ಕಾಳುಕಟ್ಟುವ ಮೊದಲೇ ಗದ್ದೆಗಳಲ್ಲಿ ನೆಲಕಚ್ಚಿದೆ. ಭುವನಗಿರಿ ಗ್ರಾಮದ ಕೃಷ್ಣ, ರಾಜಣ್ಣ, ಸಂತೋಷ್ ಎಂಬವರಿಗೆ ಸೇರಿದ ಹತ್ತು ಎಕರೆಗಳಷ್ಟು ಪ್ರದೇಶದ ಭತ್ತದ ಬೆಳೆಯು ಗದ್ದೆಗಳಲ್ಲಿ ಹಾಸಿದ ರೀತಿಯಲ್ಲಿ ಮಲಗಿದೆ. ಈ ಸಾಲಿನಲ್ಲಿ ಶುಂಠಿ, ಜೋಳದ ಬೆಲೆಯಲ್ಲಿ ಭಾರೀ ಕುಸಿತ ಇದರ ಜೊತೆಯಲ್ಲಿ ಅಲ್ಪಸ್ವಲ್ಪ ಭತ್ತದ ಬೆಳೆಯು ಉತ್ತಮವಾಗಿ ಬಂದರೂ ಸಹ ಮಳೆಯಿಂದಾಗಿ ನೆಲಕಚ್ಚಿದೆ.