ಸೋಮವಾರಪೇಟೆ, ನ. ೧೬: ಪ್ರಗತಿಪರ ಜೇನು ಕೃಷಿಕ, ಹಲವಷ್ಟು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜೇನು ಕೃಷಿಯ ಬಗ್ಗೆ ತರಬೇತಿ ನೀಡುವ ಮೂಲಕ ಸ್ವಾಧಿಷ್ಟ ಜೇನು ಕೃಷಿಯ ಉಳಿವಿಗೆ ಶ್ರಮಿಸುತ್ತಿದ್ದ ಶಾಂತಳ್ಳಿ ನಿವಾಸಿ ಸುಂದರ್ (೫೫) ಅವರು ತಾ. ೧೫ ರಂದು ಹೃದಯಾಘಾತದಿಂದ ನಿಧನರಾದರು. ಪ್ರಸ್ತುತ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಯುವಕ ಸಂಘದ ಅಧ್ಯಕ್ಷರಾಗಿ, ಆರ್‌ಎಂಸಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದು, ತಾ. ೧೭ರಂದು (ಇಂದು) ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.