ಕಣಿವೆ, ನ. ೧೪: ಹಿರಿಯರನ್ನು ಸದಾ ಕಾಲ ಸ್ಮರಿಸುವ ಮೂಲಕ ಧಾರ್ಮಿಕ ಪದ್ಧತಿಗಳನ್ನು ಅನುಸರಿಸುವುದೇ ನೈಜ ಧರ್ಮ ಎಂದು ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗಸ್ವಾಮೀಜಿ ಹೇಳಿದರು. ಆಲೂರು ಸಿದ್ದಾಪುರದ ಲಿಂಗೈಕ್ಯ ಸಿದ್ದಮಲ್ಲಯ್ಯ ಹಾಗೂ ಶಾಂತಮ್ಮ ಅವರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ದಿ. ಸಿದ್ಧಮಲ್ಲಯ್ಯ ಹಾಗೂ ಶಾಂತಮ್ಮ ದಂಪತಿಗಳು ತಮ್ಮ ಮಕ್ಕಳನ್ನು ಸಮಾಜದ ನಾನಾಸ್ತರಗಳ ಸೇವೆಗೆ ಕಳುಹಿಸುವ ಮೂಲಕ ತಮಗರಿವಿಲ್ಲದಂತೆಯೇ ಸಾಮಾಜಿಕ ಸೇವೆಗೆ ತೊಡಗಿಸಿಕೊಂಡಿದ್ದರು.
ಶತಮಾನೋತ್ಸವ ಕಾಲದ ಜೀವಿತಾವಧಿಯಲ್ಲಿ ಕಾಯಕಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸುತ್ತಮುತ್ತಲ ಸಮಾಜಕ್ಕೆ ಮಾದರಿಯಾದ ಬದುಕು ನಡೆಸಿದ್ದರು. ಇಂತಹವರ ಬದುಕು ಮನುಕುಲಕ್ಕೆ ದಾರಿದೀಪವಾಗಿದೆ ಎಂದು ಸಿದ್ದಮಲ್ಲಯ್ಯ ಅವರ ಸೇವೆಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಲಿಂಗೈಕ್ಯ ಶಾಂತಮಲ್ಲಯ್ಯ ಅವರ ಸೇವೆಯನ್ನು ಶ್ಲಾಘಿಸಿದರು.
ವೀರಾಜಪೇಟೆ ಅರಮೇರಿ ಮಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ, ಮನೇಹಳ್ಳಿ ಮಠದ ಶ್ರೀ ಮಹಾಂತ ಸ್ವಾಮೀಜಿ, ಬಸವಾಪಟ್ಟಣದ ಸ್ವತಂತ್ರ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಸಮಾಜದ ಮುಖಂಡರಾದ ಪನ್ಯದ ಎಸ್.ಬಿ. ಶಂಕರ್, ಹಂಡ್ಲಿ ವೇದಕುಮಾರ್, ನಿಡ್ತ ಧರ್ಮಪ್ಪ, ಆಲೂರು ಸಿದ್ದಾಪುರ ಹಿರಿಯರಾದ ರಾಘವಯ್ಯ, ಕರ್ನಾಟಕ ರಾಜ್ಯದ ಮಾಹಿತಿ ಆಯೋಗದ ಮಾಜಿ ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ, ಕೂಡಿಗೆ ಡಯಟ್ ಪ್ರಾಂಶುಪಾಲ ಕೆ.ವಿ.ಸುರೇಶ್ ಮೊದಲಾದವರಿದ್ದರು. ಬಳಿಕ ನೆರೆದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.