ಸೋಮವಾರಪೇಟೆ, ನ. ೧೩: ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ೨೦ನೇ ವರ್ಷದ ವಾರ್ಷಿಕ ಮಹಾಸಭೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ವಹಿಸಿದ್ದರು. ನಂತರ ಮಾತನಾಡಿ, ಸಂಘದಲ್ಲಿ ಒಟ್ಟು ೧೩೪ ಜನ ಸದಸ್ಯರಿದ್ದು, ೧೬ ಜನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದ್ದಾರೆ. ಸದಸ್ಯರ ಉತ್ತಮ ಸಹಕಾರದಿಂದ ಸಂಘದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ. ಕೊಡಗಿನಲ್ಲಿ ಮರಣ ನಿಧಿ ನೀಡುತ್ತಿರುವ ಏಕೈಕ ಸಂಘ ನಮ್ಮದಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಮುಂದೆಯೂ ಎಲ್ಲ ಸದಸ್ಯರು ತಮ್ಮ ಸಹಕಾರವನ್ನು ಮುಂದುವರೆಸ ಬೇಕೆಂದರು. ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಉಪಾಧ್ಯಕ್ಷ ಹೆಚ್.ಜಿ. ಕುಟ್ಟಪ್ಪ, ಕಾರ್ಯದರ್ಶಿ ಬಿ.ಎ. ಆನಂದ, ಸಹ ಕಾರ್ಯದರ್ಶಿ ಎಸ್.ಬಿ. ರಾಜಪ್ಪ, ಖಜಾಂಜಿ ಸಿ. ಬಿ. ಈರಪ್ಪ, ಸಲಹೆಗಾರರಾದ ಬಿ.ಕೆ. ತಿಮ್ಮಯ್ಯ, ವೀರಪ್ಪ ಮಾಸ್ಟರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಸದಸ್ಯರಾದ ಆರೋಗ್ಯ ಇಲಾಖೆಯ ಎಂ.ಎ. ರಾಜಪ್ಪ, ಶಿಕ್ಷಣ ಇಲಾಖೆಯ ಎಲ್.ಹೆಚ್. ರಾಜು, ಕೆ.ಇ. ಲಾಲಿಯಮ್ಮ, ಬಿ.ಕೆ. ಜಯಮ್ಮ ಹಾಗೂ ಕಂದಾಯ ಇಲಾಖೆಯ ಪಿ.ಪಿ. ಗೋಪಾಲ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.