ಕಣಿವೆ, ನ. ೧೩: ರಸ್ತೆ ತೀರ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರವಾಗಿದೆ ಎಂದು ಆರೋಪಿಸಿ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂತೆಬಸವನಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದರು.
ಗ್ರಾಮದ ಗ್ರಾಮ ದೈವ ಬಸವೇಶ್ವರ ದೇವಾಲಯಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ದಾರಿ ಕಿರಿದಾಗಿದೆ. ಜೊತೆಗೆ ಗುಂಡಿಗಳಿದ್ದ ಕೂಡಿದ್ದು ಮಳೆಗಾಲದಲ್ಲಿ ಈ ದಾರಿಯಲ್ಲಿ ನಡೆದು ಹೋಗುವುದು ದೊಡ್ಡ ಸಾಹಸವಾಗಿದೆ. ವಿದ್ಯಾರ್ಥಿಗಳು ಕೆಸರಿನ ನಡುವಿನ ರಸ್ತೆಯಲ್ಲಿ ಸಂಚರಿಸಬೇಕಿದೆ ಎಂದು ಗ್ರಾಮದ ನಿವಾಸಿಗಳಾದ ಪಳಂಗೋಟು ಪೊನ್ನಪ್ಪ, ಜಯಂತಿ, ಚೆರಿಯಮನೆ ಅಪ್ಪಯ್ಯ, ಜಗದೀಶ್, ಕುಯ್ಯಮುಡಿ ಜಯಕುಮಾರ್, ಕೆಂಚಮ್ಮ ಮೊದಲಾದವರು ದೂರಿದರು.
ಕೂಡಲೇ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಸಂಚಾರದ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.