ಕಣಿವೆ, ನ. ೧೨: ರಾಜ್ಯವ್ಯಾಪಿ ನಡೆದಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಆರೋಪಿಗಳಿಗೆ ಕಠಿಣವಾದ ಗಲ್ಲುಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿ ಯುವಕನೋರ್ವ ರಾಜ್ಯಾದ್ಯಂತ ಸೈಕಲ್‌ನಲ್ಲಿ ಯಾತ್ರೆ ಹಮ್ಮಿಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದಾನೆ.
ಬೆಂಗಳೂರಿನ ಬನ್ನೇರುಘಟ್ಟ ನಿವಾಸಿಯಾದ ಅಂತಿಮ ಪದವಿ ತರಗತಿ ವಿದ್ಯಾರ್ಥಿ ಕಿರಣ್ ಈಗಾಗಲೇ ಕಳೆದ ೮೦ ದಿನಗಳಿಂದ ೨೪ ಜಿಲ್ಲೆಗಳಲ್ಲಿ ಸೈಕಲ್‌ನಲ್ಲಿ ಸಂಚರಿಸಿ ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾನೆ. ಹಾಗೆಯೇ ಸೋಮವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಗಳಿಗೆ ಮನವಿಪತ್ರ ಸಲ್ಲಿಸಿ ಕುಶಾಲನಗರ ಮಾರ್ಗವಾಗಿ ಹಾಸನ ಜಿಲ್ಲೆಗೆ ಸಂಚರಿಸುತ್ತಿದ್ದಾಗ ಕಣಿವೆಯ ರಾಜ್ಯ ಹೆದ್ದಾರಿಯಲ್ಲಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಸೈಕಲ್ ಸವಾರ ಕಿರಣ್, ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ನೇರವಾಗಿ ಗಲ್ಲಿಗೇರಿಸುವಂತಹ ಕಾಯಿದೆಯನ್ನು ಸರ್ಕಾರ ಜಾರಿಗೊಳಿಸಬೇಕೆಂದು ರಾಜ್ಯದ ೩೧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಬಳಿಕ ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾನೆ.
ಸೈಕಲ್ ಮುಂಬದಿಯಲ್ಲಿ ‘ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ’ ಎಂಬ ನಾಮಫಲಕ ಹಾಕಲಾಗಿದೆ. ಹಾಗೆಯೇ ಸೈಕಲ್ ಹಿಂಬದಿಯಲ್ಲಿ ಸೈಕಲ್ ಕಿಟ್, ಆರೋಗ್ಯದ ಕಿಟ್, ರಾತ್ರಿ ತಂಗುವ ಟೆಂಟ್ ಕಿಟ್ ಹಾಗೂ ಬಟ್ಟೆಗಳ ಬ್ಯಾಗ್‌ಗಳನ್ನು ಇಟ್ಟುಕೊಂಡು ರಾಜ್ಯವ್ಯಾಪಿ ಸಂಚರಿಸುತ್ತಿರುವ ಈ ವಿದ್ಯಾರ್ಥಿಯ ಸಾಮಾಜಿಕ ಬದ್ಧತೆಯನ್ನು ಗಮನಿಸಿದ ಕುಶಾಲನಗರದ ಷಟಲ್ ಬ್ಯಾಡ್ಮಿಂಟನ್ ಆಟಗಾರರಾದ ಪಾಣತ್ತಲೆ ಗಿರೀಶ್, ಅರುಣಕುಮಾರ್, ಹೇಮಂತ ಕುಮಾರ್, ಹರೀಶ್, ರಾಜೇಶ್ ಮೊದಲಾದವರು ಸ್ವಾಗತಿಸಿ ಹಾಸನ ಜಿಲ್ಲೆಯತ್ತ ಬೀಳ್ಕೊಟ್ಟರು.