ವೀರಾಜಪೇಟೆ, ನ. ೧೩: ಕೊಡಗು-ಕೇರಳ ಗಡಿ ಪ್ರವೇಶಕ್ಕೆ ಮುಕ್ತ ಮಾಡುವಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.
ನಗರದ ದೊಡ್ಡಟ್ಟಿ ಚೌಕಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರು, ಕೊರೊನಾ ಸೋಂಕು ಹರಡದಂತೆ ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಗಡಿ ಭಾಗದಿಂದ ಪ್ರವೇಶವನ್ನು ನಿರ್ಬಂಧ ಹೇರಿತ್ತು. ಸೋಂಕು ಇಳಿಮುಖವಾಗಿರುವುದರಿಂದ ಅಂತರರಾಜ್ಯದ ಗಡಿ ಭಾಗವು ಪ್ರವೇಶವು ಮುಕ್ತವಾಗಿವೆ. ಆದರೆ ಕೊಡಗು ಜಿಲ್ಲೆಯ ಗಡಿಭಾಗವಾದ ಮಾಕುಟ್ಟ ಮತ್ತು ಕುಟ್ಟ ಭಾಗವನ್ನು ಪ್ರವೇಶಕ್ಕೆ ಮುಕ್ತಗೊಳಿಸಿಲ್ಲ. ಗಡಿ ಪ್ರವೇಶ ಮಾಡುವ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್. ವರದಿ ಮತ್ತು ಎರಡು ವ್ಯಾಕ್ಸಿನ್ ದೃಢೀಕರಣ ಕಡ್ಡಾಯಗೊಳಿಸಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ರೈಲು ಸಂಚಾರ ಸೇರಿದಂತೆ ಎಲ್ಲಾ ಸರಕು ವಾಹನಗಳು, ಪ್ರಯಾಣಿಕ ವಾಹನಗಳು ಗಡಿ ಪ್ರವೇಶಕ್ಕೆ ಮುಕ್ತಗೊಳಿಸಿದೆ. ಜಿಲ್ಲಾಡಳಿತವು ದ್ವಿಮುಖ ನೀತಿಯನ್ನು ಅನುಸರಿಸಿ ಕೊಂಡು ಮುಂದುವರೆದಿದೆ. ಈ ನಿಟ್ಟಿನಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಕಾಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಜಿಲ್ಲಾ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಅಧ್ಯಕ್ಷ ನರೇಂದ್ರ ಕಾಮತ್, ಬ್ಲಾಕ್ ಪ್ರಧಾನ ಕಾರ್ಯದÀರ್ಶಿ ಜಾನ್ಸನ್, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಅವರು ಹಾಜರಿದ್ದರು.