ಮಡಿಕೇರಿ, ನ. ೧೩: ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಭತ್ತದ ಬೆಳೆಗೆ ನಿರಂತರವಾಗಿ ಕಾಡಾನೆಗಳ ಹಿಂಡು ದಾಳಿ ಮಾಡಿ ಬೆಳೆಯನ್ನು ನಾಶ ಮಾಡುತ್ತಿವೆ.
ನೆನ್ನೆ ದಿನ ಗ್ರಾಮದ ಕೃಷಿಕರಾದ ಪುಲಿಯಂಡ ಜಗದೀಶ್ ಮತ್ತು ಅಯ್ಯಪ್ಪನವರ ಭತ್ತದ ಗದ್ದೆಗೆ ಧಾಳಿ ಮಾಡಿದ ಕಾಡಾನೆಗಳು ಮುಂದಿನ ಹತ್ತು ದಿನಗಳಲ್ಲಿ ಕಟಾವು ಮಾಡಬೇಕಿದ್ದ ಬೆಳೆಯನ್ನು ನಾಶಪಡಿಸಿವೆ. ಎರಡು ತಿಂಗಳ ಹಿಂದೆ ಕೂಡ ಇಲ್ಲಿ ಕಾಡಾನೆಗಳು ದಾಳಿ ಮಾಡಿ ನಷ್ಟ ಮಾಡಿದ್ದವು .ಈಗ ಪುನಃ ಗದ್ದೆಯನ್ನು ತೊಯ್ದಾಡಿವೆ.
ನಿರಂತರ ಕಾಡಾನೆ ಉಪಟಳದಿಂದ ಬೇಸತ್ತಿರುವ ಕೃಷಿಕರು ಸೂಕ್ತ ಕ್ರಮ ವಹಿಸಲು ಒತ್ತಾಯಿಸಿದ್ದಾರೆ.
ಮಾಹಿತಿಯನ್ನು ಸ್ಥಳೀಯರು ವಲಯ ಅರಣ್ಯಾಧಿಕಾರಿ ದೇವಯ್ಯನವರಿಗೆ ತಿಳಿಸಿದ ತಕ್ಷಣವೇ ದೌಡಾಯಿಸಿದ ಸಹಾಯಕ ವಲಯ ಅರಣ್ಯ ಅಧಿಕಾರಿ ಶ್ರೀಶೈಲ, ಚಂದ್ರಶೇಖರ್ ಸೇರಿದಂತೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.
ಗ್ರಾಮಸ್ಥರುಗಳಾದ ಕುಪ್ಪಚ್ಚಿರ ಮದನ್, ಸತೀಶ್, ಡಾಲು, ಪುಲಿಯಂಡ ಡೆನ್ನಿ ಮತ್ತಿತರರು ಸ್ಥಳದಲ್ಲಿ ಮಾಹಿತಿ ಒದಗಿಸಿದರು.