ಡಿಸೆಂಬರ್‌ನಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ

ಬೆಂಗಳೂರು/ನವದೆಹಲಿ, ನ. ೧೧: ಪ್ರಧಾನಿ ನರೇಂದ್ರ ಮೋದಿ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕಕ್ಕೆ ಆಗಮಿಸಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗಳೂರು ಉಪ ನಗರ ರೈಲು ಯೋಜನೆಯ ಅಡಿಗಲ್ಲು ಸಮಾರಂಭ, ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಹಾಗೂ ಉನ್ನತೀಕರಿಸಿದ ಐಟಿಐಗಳ ಉದ್ಘಾಟನೆ ಹಾಗೂ ಬೆಂಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಮುಂದಿನ ತಿಂಗಳು ಹಮ್ಮಿಕೊಳ್ಳಲಾಗಿದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸುವಂತೆ ಪ್ರಧಾನಿ ಅವರಿಗೆ ಆಹ್ವಾನ ನೀಡಿದ್ದಾರೆ. ಈ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ದಿನಾಂಕವಿನ್ನು ನಿಗದಿಯಾಗಿಲ್ಲ. ಪ್ರಧಾನಿಗಳು ಕಾರ್ಯಕ್ರಮಗಳಿಗೆ ಆಗಮಿಸಲು ಬೊಮ್ಮಾಯಿಗೆ ಒಪ್ಪಿಗೆ ಸೂಚಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಎರಡು ದಿನ ಈ ಕಾರ್ಯಕ್ರಮಗಳನ್ನು ನಿಗದಿಪಡಿಸುವಂತೆ ಪ್ರಧಾನಿಯವರು ತಿಳಿಸಿದ್ದು, ಎರಡು ಬಾರಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಕಾರ್ಯಾಲಯ ನಿಗದಿಪಡಿಸಿದ ದಿನಾಂಕಗಳAದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಪ್ರಧಾನಿಯವರು ವಿಶೇಷವಾಗಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಹಾಗೂ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಕ್ರಮಗಳನ್ನು ಶ್ಲಾಘಿಸಿದರು.

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ-ಹೈಕೋರ್ಟ್ ಅಸಮಾಧಾನ

ಬೆಂಗಳೂರು, ನ. ೧೧: ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡುವ ವಿಚಾರಕ್ಕೆ ಸಂಬAಧಿಸಿದAತೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕನ್ನಡ ಕಡ್ಡಾಯ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ನೀತಿಗೆ ಅಸಮಾಧಾನ ವ್ಯಕ್ತಪಡಿಸಿತು. ಇದರಲ್ಲಿ ಏಕೆ ರಾಜಕೀಯ ಬೆರೆಸುತ್ತಿದ್ದೀರಿ? ಈ ನೀತಿಯಿಂದಾಗಿ ಎಷ್ಟು ವಿದ್ಯಾರ್ಥಿಗಳು ಹೊರ ಹೋಗಿದ್ದಾರೆ ಗೊತ್ತೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿತು. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಬಹುದೇ? ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಲು ಅವಕಾಶವಿದೆಯೇ? ಎಂದು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿತು. ಕನ್ನಡ ಭಾಷೆ ಕಲಿಕೆ ಪ್ರೋತ್ಸಾಹಿಸಲು ಅವಕಾಶವಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರದ ವಕೀಲರು ಹೇಳಿದರು. ಈ ಬಗ್ಗೆ ಸರ್ಕಾರ ವಾದ ಮಂಡನೆಗೆ ಕಾಲಾವಕಾಶ ಕೋರಿದ್ದು, ವಿಚಾರಣೆಯನ್ನು ತಾ. ೧೫ಕ್ಕೆ ಮುಂದೂಡಲಾಗಿದೆ.

ಆನ್‌ಲೈನ್ ಗೇಮ್ಸ್ಗೆ ನಿಷೇಧ

ಬೆಂಗಳೂರು, ನ. ೧೧: ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿ ಎಲ್ಲಾ ಬಗೆಯ ಆನ್‌ಲೈನ್ ಗೇಮ್‌ಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ರಾಜ್ಯ ಸರ್ಕಾರದ ಈ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಇಂದು ಹೈಕೋರ್ಟ್ನಲ್ಲಿ ನಡೆಸಲಾಯಿತು. ಅರ್ಜಿಗಳು ಇತ್ಯರ್ಥ ಆಗುವವರೆಗೆ ಆನ್‌ಲೈನ್ ಗ್ಯಾಂಬ್ಲಿAಗ್ ಮತ್ತು ಗೇಮಿಂಗ್ ಕಂಪೆನಿಗಳ ವಿರುದ್ಧ ಬಲವಂತದ ಕ್ರಮವಿಲ್ಲ. ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ನೀಡಿರುವ ಭರವಸೆ ಮುಂದುವರಿಯುತ್ತದೆ ಎಂದು ಹೇಳಿ ಹೈಕೋರ್ಟ್ ತಾ. ೧೮ಕ್ಕೆ ವಿಚಾರಣೆ ಮೂಂದೂಡಿತು.

ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಲಾಹೋರ್

ಇಸ್ಲಾಮಾಬಾದ್, ನ. ೧೧: ಯುಎಸ್ ಏರ್ ಕ್ವಾಲಿಟಿ ಇಂಡೆಕ್ಸ್ ಬಿಡುಗಡೆ ಮಾಡಿದ ವಾಯು ಮಾಲಿನ್ಯದ ಅಂಕಿಅAಶಗಳ ಪ್ರಕಾರ, ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನದ ರಾಜಧಾನಿ ಲಾಹೋರ್‌ನಲ್ಲಿ ಬುಧವಾರ ವಾಯು ಗುಣಮಟ್ಟ ಸೂಚ್ಯಂಕವು ೬೦೦ಕ್ಕೂ ಹೆಚ್ಚು ಪ್ರಮಾಣದಲ್ಲಿ ದಾಖಲಾಗಿದೆ. ಪಟ್ಟಿಯಲ್ಲಿ ಕರಾಚಿ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಕೂಡ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಪಡೆದಿತ್ತು. ಲಾಹೋರ್‌ನ ಗುಲ್ಬರ್ಗ್ನಲ್ಲಿ ೬೮೧, ರೈವಿಂಡ್‌ನಲ್ಲಿ ೬೨೬, ಅನಾರ್ಕಲಿ ಮಾರುಕಟ್ಟೆಯಲ್ಲಿ ೫೪೧ ಮತ್ತು ಮಾಡೆಲ್ ಟೌನ್‌ನಲ್ಲಿ ೫೩೨ ಮಟ್ಟ ದಾಖಲಾಗಿದೆ. ಈ ನಡುವೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹೊಗೆ ಆವರಿಸಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

ಒಡಿಶಾ-ಮಹಾರಾಷ್ಟçದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ

ಬೆಂಗಳೂರು, ನ. ೧೧: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರ ಘಟಕಗಳಿಗೆ ಮಹಾರಾಷ್ಟç ಮತ್ತು ಒಡಿಶಾದಿಂದ ಕಲ್ಲಿದ್ದಲು ಪೂರೈಕೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾಗಿ, ಮಹಾರಾಷ್ಟçದಿಂದ ಹೆಚ್ಚುವರಿ ಕಲ್ಲಿದ್ದಲು ಪೂರೈಕೆಗೆ ಮನವಿ ಮಾಡಿದ್ದೇನೆ. ಅವರು ಕರ್ನಾಟಕಕ್ಕೆ ಹೆಚ್ಚುವರಿ ಕಲ್ಲಿದ್ದಲು ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಡಿಶಾದ ಮಂದಕರಿಯಲ್ಲಿನ ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರಕ್ಕೆ ಗುತ್ತಿಗೆ ದೊರೆತಿದೆ. ಕೇಂದ್ರದ ಪರಿಸರ ಅನುಮತಿಯೂ ದೊರೆತಿದೆ. ಶೀಘ್ರವೇ ಗಣಿಗಾರಿಕೆ ಆರಂಭಿಸಲಾಗುವುದು. ಸದ್ಯಕ್ಕೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಇಲ್ಲ. ಗಣಿಗಾರಿಕೆ ಆರಂಭವಾದ ನಂತರ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಲಭ್ಯವಾಗಲಿದೆ. ಮಹಾರಾಷ್ಟçದ ಗಣಿಯಿಂದಲೂ ಅಧಿಕ ಪ್ರಮಾಣದ ಕಲ್ಲಿದ್ದಲು ಪೂರೈಸಲು ಮನವಿ ಮಾಡಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಕೆದಾಟು ಯೋಜನೆ ಆರಂಭಿಸಲು ಕೇಂದ್ರದ ಪರಿಸರ ಅನುಮತಿ ಮಾತ್ರವಲ್ಲದೆ, ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿಯೂ ಬೇಕಿದೆ. ಆದರೂ ವಿನಾಕಾರಣ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.

ಸಹಕಾರ ಸಪ್ತಾಹ ತಾತ್ಕಾಲಿಕವಾಗಿ ಮುಂದೂಡಿಕೆ

ಬೆAಗಳೂರು, ನ. ೧೧: ಸಹಕಾರಿ ಸಪ್ತಾಹವನ್ನು ಯಶಸ್ವಿವಾಗಿ ಆಚರಿಸಲು ಪ್ರತಿ ವರ್ಷ ನವೆಂಬರ್ ೧೪ ರಂದು ಹಮ್ಮಿಕೊಳ್ಳಲಾಗುತ್ತಿತ್ತು. ರಾಜ್ಯದ ನಾನಾ ಜಿಲ್ಲೆಗಳಲ್ಲಿ ೭ ದಿನ ಸಹಕಾರ ಸಪ್ತಾಹ ಹಮ್ಮಿಕೊಳ್ಳುವುದರ ಜೊತೆಗೆ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಮುಖ್ಯಮಂತ್ರಿಗಳು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು. ಈ ವರ್ಷ ಕೂಡ ನವೆಂಬರ್ ೧೪ರ ಭಾನುವಾರ ಬೆಂಗಳೂರಿನಲ್ಲಿ, ನಂತರ ನಾನಾ ಜಿಲ್ಲೆಗಳಲ್ಲಿ ಸಹಕಾರ ಸಪ್ತಾಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ೨೦ ಸ್ಥಳೀಯ ಸಂಸ್ಥೆಗಳಿAದ ೨೫ ವಿಧಾನ ಪರಿಷತ್ ಸ್ಥಾನಗಳಿಗೆ ಡಿ. ೧೦ ರಂದು ವಿಧಾನ ಪರಿಷತ್ ಚುನಾವಣೆ ನಡೆಯುವುದರಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ತಾ. ೧೪ ರಿಂದ ನಡೆಯಬೇಕಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.