ಮಡಿಕೇರಿ, ನ. ೧೨: ಚೈಲ್ಡ್ಲೈನ್ ೧೦೯೮ ಸೇವೆಯು ೨೫ ವರ್ಷ ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಪ್ರತಿ ವರ್ಷದಂತೆ ಈ ವರ್ಷ ಕೂಡ ತಾ. ೧೪ ರಿಂದ ೨೦ ರವರೆಗೆ ಚೈಲ್ಡ್ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮವನ್ನು ದೇಶದಾದ್ಯಂತ ಆಯೋಜಿಸಲಾಗಿದೆ.
ಅದರಂತೆ ಜಿಲ್ಲಾ ಮಟ್ಟದಲ್ಲಿರುವ ಮಕ್ಕಳ ಸಹಾಯವಾಣಿ ೧೦೯೮ ಕೇಂದ್ರಗಳ ಮುಖಾಂತರ ಮಕ್ಕಳ ರಕ್ಷಣೆ ಮತ್ತು ಪೋಷಣೆಯನ್ನು ಖಾತರಿಪಡಿಸಲು ಮತ್ತು ಜಾಗೃತಿಯನ್ನು ಮೂಡಿಸಲು ಒಂದು ವರ್ಷದ ಚೈಲ್ಡ್ಲೈನ್ ಸೇ ದೋಸ್ತಿ ಸಪ್ತಾಹ (ಚೈಲ್ಡ್ಲೈನ್ ಮಿತ್ರ) ಅಭಿಯಾನವು ತಾ. ೧೪ ರಿಂದ ೨೦ ರವರೆಗೆ ನಡೆಯಲಿದೆ.
ಮಕ್ಕಳ ಸಹಾಯವಾಣಿ ೧೦೯೮ ಸೇವೆಯು ದಿನದ ೨೪ ಗಂಟೆಗಳ ಕಾಲ ತುರ್ತು ಪರಿಸ್ಥಿತಿಯಲ್ಲಿ ಇರುವ ಮಕ್ಕಳಿಗೆ ದೂರವಾಣಿ ಹಾಗೂ ಹೊರ ಸಂಪರ್ಕ ಸೇವೆಗಳ ಮೂಲಕ ರಕ್ಷಣೆ ಮತ್ತು ಪೋಷಣೆಯನ್ನು ಒದಗಿಸುವ ರಾಷ್ಟಿçÃಯ ಉಚಿತ ಕರೆ ಸೇವೆಯಾಗಿದೆ. ಈ ಸೇವೆಯು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ‘ಮಿಶನ್ ವಾತ್ಸಲ್ಯ’ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳು, ಸಮುದಾಯದವರು, ಸ್ವಯಂ ಸೇವಕರು, ಸಾರ್ವಜನಿಕರು, ಮಕ್ಕಳು ಮತ್ತು ಮಾಧ್ಯಮದವರೊಂದಿಗೆ ಜೊತೆಗೂಡಿ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ ಮತ್ತು ಪೋಷಣೆ, ಮಕ್ಕಳ ರಕ್ಷಣೆಗೆ ಇರುವ ವಿವಿಧ ಇಲಾಖೆಗಳ ಕಾನೂನು ಕಾಯಿದೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅಧಿಕ ಸಂಖ್ಯೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸ್ವಯಂ ಸೇವಕರನ್ನು ಗುರುತಿಸುವ ಅಭಿಯಾನವಾಗಿದೆ.