ಗೋಣಿಕೊಪ್ಪಲು, ನ. ೧೦: ಹುಲಿಯ ಹಲ್ಲುಗಳನ್ನು ಅಕ್ರಮವಾಗಿ ಮಾರಾಟ ಮಾಡುವವರನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ಹಾಗೂ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದು ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ಹೆಣೆದ ಬಲೆಗೆ ಆರೋಪಿಗಳು ತಾವಾಗಿಯೇ ಬಿದ್ದ ಘಟನೆ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಬಸ್ ತಂಗುದಾಣದ ಬಳಿ ನಡೆದಿದೆ.

ಚಿಕ್ಕಮಂಡೂರಿನ ಪವನ್ ಪೂವಯ್ಯ (೩೦) ಸುಳುಗೋಡುವಿನ ಸಂತೋಷ್ ಕುಮಾರ್ (೨೯), ಗಣೇಶ್ (೨೦) ಹಾಗೂ ಕೋತೂರಿನ ಕೆ.ವಿ.ಸಂತೋಷ್ (೨೫) ಬಂಧಿತ ಆರೋಪಿಗಳು. ಇವರುಗಳಿಂದ ಅಂದಾಜು ೧.೫೦ ಲಕ್ಷ ಮೌಲ್ಯದ ೬ ಹುಲಿ ಹಲ್ಲುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಪೊಲೀಸ್ ಅರಣ್ಯ ಸಂಚಾರಿ ದಳ ವೀರಾಜಪೇಟೆ ಹಾಗೂ ತಿತಿಮತಿ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆಯ ಮೂಲಕ ಹುಲಿ ಹಲ್ಲುಗಳ ಮಾರಾಟದ ಆರೋಪಿಗಳನ್ನು ಖೆಡ್ಡಾಕ್ಕೆಕೆಡುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿ ಗಳಿಗೆ ಕೆಲವು ದಿನಗಳ ಹಿಂದೆ ಅಕ್ರಮ ಹುಲಿ ಹಲ್ಲು ಮಾರಾಟ ಮಾಡುವ ಮಧ್ಯವರ್ತಿ ಪವನ್ ಮೇಲೆ ಅನುಮಾನಗಳಿದ್ದವು. ಈ ಬಗ್ಗೆ ಪೊಲೀಸ್ ಹಾಗೂ ಅಧಿಕಾರಿಗಳು ಈತನ ಬಳಿ ಮಾರುವೇಷದಲ್ಲಿ ತೆರಳಿ ಒಂದು

(ಮೊದಲ ಪುಟದಿಂದ) ಹುಲಿ ಹಲ್ಲಿಗೆ ರೂ. ೨೫ ಸಾವಿರ ನೀಡುವ ಮೂಲಕ ಹಲ್ಲುಗಳನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ಪವನ್‌ಗೆ ವ್ಯಾಪಾರಕ್ಕೆ ಬಂದಿರುವವರು ಅಧಿಕಾರಿಗಳು ಎಂದು ಅರಿವಿಗೆ ಬಂದಿರಲಿಲ್ಲ. ಹೀಗಾಗಿ ಹುಲಿ ಹಲ್ಲುಗಳನ್ನು ನೀಡುವುದಾಗಿ ಹೇಳಿದ್ದ. ಇದರಂತೆ ವ್ಯವಹಾರ ಕುದುರಿಸಲು ನ. ೯ರ ಮಧ್ಯಾಹ್ನದ ವೇಳೆ ಪವನ್ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಬಸ್ ತಂಗುದಾಣದ ಬಳಿ ಬರುವುದಾಗಿ ತಿಳಿಸಿದ್ದ.

ಇತ್ತ ಜಂಟಿ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು ಮಾರುವೇಷದÀಲ್ಲಿ ಹಣದೊಂದಿಗೆ ಪವನ್ ತರುವ ಹುಲಿ ಹಲ್ಲುಗಳಿಗಾಗಿ ತಂಗುದಾಣದಲ್ಲಿ ಕಾದು ಕುಳಿತಿದ್ದರು. ಸಮಯ ಕಳೆಯುತ್ತಿದ್ದಂತೆಯೆ ಪವನ್ ಹಾಗೂ ಇತರ ಮೂರು ಸ್ನೇಹಿತರು ತಮ್ಮ ಸ್ಕೂಟರ್ ಹಾಗೂ ಬೈಕಿನಲ್ಲಿ ಚೆನ್ನಂಗೊಲ್ಲಿ ಬಳಿ ಆಗಮಿಸಿ ವ್ಯವಹಾರ ಕುದುರಿಸುವ ಕಾರ್ಯದಲ್ಲಿ ತೊಡಗಿದ್ದರು. ಹುಲಿ ಹಲ್ಲುಗಳನ್ನು ನೀಡಿ ಹಣವನ್ನು ಪಡೆಯುತ್ತಿದ್ದ ವೇಳೆ ಅನತಿ ದೂರದಲ್ಲಿದ್ದ ಇತರ ಅಧಿಕಾರಿಗಳು ಇವರನ್ನು ಸುತ್ತುವರೆದು ಇವರ ಬಳಿ ಇದ್ದ ಹುಲಿ ಹಲ್ಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ಅರಣ್ಯ ಸಂಚಾರಿ ದಳದ ಎಸ್ಪಿ ಸುರೇಶ್ ಬಾಬು ಹಾಗೂ ಅರಣ್ಯ ಇಲಾಖೆಯ ಡಿಎಫ್‌ಒ ಚಕ್ರಪಾಣಿ ಮಾರ್ಗದರ್ಶನದ ಜಂಟಿ ಕಾರ್ಯಾಚರಣೆಯ ಪೊಲೀಸ್ ಸಂಚಾರಿ ದಳದ ಎಸ್‌ಐ ವೀಣಾ ನಾಯಕ್, ಸಿಬ್ಬಂದಿಗಳಾದ ಮಂಜುನಾಥ್, ದೇವಯ್ಯ, ಬೀನಾ, ಯೋಗೇಶ್ ಹಾಗೂ ತಿತಿಮತಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ್, ಉಪ ವಲಯ ಅರಣ್ಯಾಧಿಕಾರಿ ಉಮಾಶಂಕರ್ ಎ.ಎಸ್. ಹಾಲೇಶ್, ಅರಣ್ಯ ರಕ್ಷಕರಾದ ರೇವಪ್ಪ, ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉತ್ತಪ್ಪ, ಸೇರಿದಂತೆ ಮುಂತಾದವರು ಇದ್ದರು. -ಹೆಚ್.ಕೆ.ಜಗದೀಶ್