*ಗೋಣಿಕೊಪ್ಪ, ನ. ೧೦: ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮಗಳ ಸೌಲಭ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಗಿರಿಗೌಡ ಚಾಲನೆ ನೀಡಿದರು.
ಪೊನ್ನಂಪೇಟೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಆವರಣದಲ್ಲಿ ವೀರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಪೊನ್ನಂಪೇಟೆ ವಕೀಲರ ಸಂಘ ಯೋಜನೆಯಲ್ಲಿ ಕಾನೂನು ಹಕ್ಕುಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಜಾಥಾವನ್ನು ಉದ್ಟಾಟಿಸಿ ಮಾತನಾಡಿದ ನ್ಯಾಯಾಧೀಶ ಗಿರಿಗೌಡ ಅವರು, ಕಾನೂನು ಸೇವೆಗಳ ಪ್ರಾಧಿಕಾರಗಳು ಜನರ ಕಾನೂನು ಹಕ್ಕುಗಳ ಸಂರಕ್ಷಣೆಗೆ ಬದ್ಧವಾಗಿದೆ. ಜನಸಾಮಾನ್ಯರಿಗೆ ಕಾನೂನು ಬಗ್ಗೆ ಅರಿವನ್ನುಂಟುಮಾಡಿ ಉಚಿತ ಕಾನೂನು ನೆರವು ಮತ್ತು ಸಲಹೆ ನೀಡುವುದು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸುವುದು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಉದ್ದೇಶವಾಗಿದೆ. ರಾಜ್ಯಾದ್ಯಂತ ಲೋಕ ಅದಾಲತ್ ಮತ್ತು ಮೆಗಾಲೋಕ ಅದಾಲತ್ ಆಯೋಜಿಸಲಾಗುತ್ತಿದೆ. ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಳ್ಳಲು ಲೋಕಅದಾಲತ್ ಒಂದು ಅವಕಾಶವನ್ನು ಕಲ್ಪಿಸಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪೊನ್ನಂಪೇಟೆ ಶಿಶು ಅಭಿವೃದ್ಧಿ ಇಲಾಖೆ ಆವರಣದಿಂದ ಬಸವೇಶ್ವರ ದೇವಸ್ಥಾನದವರೆಗೆ ಅಂಗನವಾಡಿ ಕಾರ್ಯಕರ್ತರು ಮೆರವಣಿಗೆ ನಡೆಸಿ ಜಾಗೃತಿ ಬಿತ್ತಿಪತ್ರಗಳನ್ನು ಹಂಚಿ ಕಾನೂನು ಸೌಲಭ್ಯಗಳ ಬಗ್ಗೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಯೋಜನಾ ನಿರ್ದೇಶಕ ರಾಜೇಶ್, ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಕಳಕಂಡ ಮುತ್ತಪ್ಪ, ಉಪಾಧ್ಯಕ್ಷ ಅಯ್ಯಪ್ಪ, ಅಜ್ಜಮಾಡ ಮೋನಿ ಪೊನ್ನಪ್ಪ ಪಾಲ್ಗೊಂಡಿದ್ದರು.