ಗೋಣಿಕೊಪ್ಪಲು, ನ.೮: ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಕಿರುಗೂರು, ನಲ್ಲೂರು, ಬಾಳೆಲೆ ಮುಖ್ಯ ರಸ್ತೆಯು ಅತ್ಯಂತ ದುರವಸ್ಥೆಯಿಂದ ಕೂಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪೊನ್ನಂಪೇಟೆಯ ಕಿರುಗೂರು ಜಂಕ್ಷನ್‌ನಲ್ಲಿ ಸೇರಿದ ತಾಲೂಕಿನ ವಿವಿಧ ಭಾಗದ ರೈತ ಮುಖಂಡರು ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಚೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೆಲ ಕಾಲ ರಸ್ತೆಯಲ್ಲಿಯೇ ಘೇರಾವು ಹಾಕಿದ ಪ್ರಸಂಗವು ಎದುರಾಯಿತು. ಈ ವೇಳೆ ಪ್ರತಿಭಟನಾಕಾರರ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಹೋರಾಟ ಗಾರರಿಗೆ ಮಣಿದ ಅಧಿಕಾರಿಗಳು ತಿಂಗಳೊಳಗೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು.

ದ.ಕೊಡಗಿನ ಕಿರುಗೂರು, ನಲ್ಲೂರು, ಬಾಳೆಲೆಗೆ ಸಂಪರ್ಕ ಮಾಡುವ ರಸ್ತೆಯ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಸರ್ಕಾರದೊಂದಿಗೆ ಚರ್ಚಿಸಿ ಆದ್ಯತೆ ಮೇರೆ ಈ ಮುಖ್ಯ ರಸ್ತೆಯ ಅಭಿವೃದ್ಧಿಗೆ ಮೂರು ಕೋಟಿ ಹಣವನ್ನು ಮಂಜೂರು ಮಾಡಿಸಿದ್ದರು. ಈ ರಸ್ತೆ ಕಾಮಗಾರಿಯ ಟೆಂಡರ್ ಪಡೆದ ಕುಶಾಲನಗರದ ಗುತ್ತಿಗೆದಾರರು ಇದ್ದ ರಸ್ತೆಯನ್ನು ಸಂಪೂರ್ಣ ತೆಗೆದು ಅವಶ್ಯವಿರುವ ಕಡೆ ಮೋರಿಯನ್ನು ಅಳವಡಿಸಿ, ರಸ್ತೆಯ ಎರಡು ಬದಿಯಲ್ಲಿರುವ ಕೆಲವು ಮರಗಳನ್ನು ತೆಗೆದು ನಂತರ ಮರು ಡಾಂಬರೀಕರಣ ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರರು ಇದ್ದ ರಸ್ತೆಯನ್ನು ಅಗೆದು ಕೆಲಸವನ್ನು ಪೂರ್ತಿಗೊಳಿಸದೆ ಅರ್ಧದಲ್ಲಿಯೇ ಕೆಲಸ ನಿಲ್ಲಿಸಿ ತೆರಳಿದ್ದರು. ತದ ನಂತರ ರಸ್ತೆಯು ಹಳ್ಳ ಕೊಳ್ಳಗಳಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಈ ಭಾಗದ ರಸ್ತೆಯಲ್ಲಿ ಓಡಾಡುವ ವಾಹನಗಳು ರಸ್ತೆಯ ದುಸ್ಥಿತಿಯಿಂದಾಗಿ ಅಪಘಾತಕ್ಕೀಡಾಗಿದ್ದಲ್ಲದೇ ಅನೇಕ ರೀತಿಯ ತೊಂದರೆಗಳನ್ನು ಎದುರಿಸುವಂತಾಗಿದೆ. ಹಲವಾರು ವಾಹನಗಳು ಹಾಳಾಗಿ ವರ್ಕ್ಸ್ ಶಾಪ್ ಸೇರಿದ್ದವು. ಸಾರ್ವಜನಿಕರು ಈ ರಸ್ತೆಯಿಂದ ನಿರಂತರ ತೊಂದರೆ ಎದುರಿಸುತ್ತಿದ್ದರು. ಇದನ್ನು ಮನಗಂಡ ರೈತ ಸಂಘವು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದಿಢೀರ್ ಪ್ರತಿಭಟನೆ ಹಾದಿ ಹಿಡಿದಿದ್ದರು.

ಪ್ರತಿಭಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳನ್ನು ಬರಮಾಡಿಕೊಂಡ ರೈತ ಸಂಘದ ಮುಖಂಡರು ಅಧಿಕಾರಿಗಳ ಸಮ್ಮುಖದಲ್ಲಿ ದುಸ್ಥಿತಿಯಲ್ಲಿರುವ ರಸ್ತೆಯನ್ನು ಪರಿಶೀಲನೆ ನಡೆಸಿದರು. ಕೂಡಲೇ ಅರ್ಧದಲ್ಲಿಯೆ ನಿಂತು ಹೋಗಿರುವ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು. ತಪ್ಪಿದಲ್ಲಿ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಲೋಕೋಪಯೋಗಿ ಇಲಾಖೆಯ ವೀರಾಜಪೇಟೆಯ ನೂತನ ಎಇಇ ಸಿದ್ದೇಗೌಡ. ಇತ್ತೀಚೆಗೆ ಇಲ್ಲಿಗೆ ಆಗಮಿಸಿದ್ದೇನೆ. ಇಲ್ಲಿಯ ಪರಿಸ್ಥಿತಿ ಅವಲೋಕಿಸಿರುವೆ. ರಸ್ತೆ ಕಾಮಗಾರಿಯ ಕೆಲಸವನ್ನು ಒಂದು ತಿಂಗಳೊಳಗೆ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಲು ಚೆಸ್ಕಾಂ ಇಲಾಖೆಗೆ ತಕ್ಷಣ ಪತ್ರ ಬರೆಯಲಾಗುವುದು ಹಾಗೂ ರಸ್ತೆ ಬದಿಯಲ್ಲಿರುವ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುವುದು. ನಂತರ ನಾಗರಿಕರ ಸುಗಮ ಸಂಚಾರಕ್ಕೆ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು; ಅಲ್ಲಿಯ ತನಕ ಸಮಯವಕಾಶಬೇಕೆಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಚೆಸ್ಕಾಂ ಇಲಾಖೆಯ ಬಾಳೆಲೆ ಹೋಬಳಿಯ ಇಂಜಿನಿಯರ್ ರಂಗಸ್ವಾಮಿ ರಸ್ತೆಯ ಎರಡು ಬದಿಯಲ್ಲಿರುವ ೩೦ಕ್ಕೂ ಅಧಿಕ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಲು ಎರಡು ದಿನದ ಒಳಗೆ ಕ್ರಮ ಕೈಗೊಳ್ಳಲಾಗುವುದೆಂದರು. ಸ್ಥಳದಲ್ಲಿದ್ದ ಪೊನ್ನಂಪೇಟೆ ಆರ್‌ಎಫ್‌ಒ ರಾಜಪ್ಪ ರಸ್ತೆ ಅಡಚಣೆಯಾಗಿರುವ ಮರಗಳನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ತೆಗೆದು ರಸ್ತೆ ಕಾಮಗಾರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಕ್ಷೇತ್ರದ ಶಾಸಕರು ಸರ್ಕಾರದೊಂದಿಗೆ ಮಾತುಕತೆ ನಡೆಸಿ ರಸ್ತೆ ಅಭಿವೃದ್ಧಿಗೆ ಕೋಟ್ಯಾಂತರ ಹಣವನ್ನು ಮಂಜೂರು ಮಾಡಿಸಿದ್ದಾರೆ. ಆದರೆ ಗುತ್ತಿಗೆದಾರ ಹಾಗೂ ಇಲಾಖಾ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆಯಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ಒಂದು ವರ್ಷದ ಹಿಂದೆಯೇ ಮಂಜೂರಾದ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಪ್ರತಿಭಟನೆ ಅನಿವಾರ್ಯವಾಯಿತು ಎಂದರು. ರಸ್ತೆ ಕಾಮಗಾರಿ ಆರಂಭಿಸದಿದ್ದಲ್ಲಿ ಮುಂದಿನ ಹೋರಾಟ ಉಗ್ರ ರೂಪ ತಾಳಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪೊನ್ನಂಪೇಟೆಯಲ್ಲಿ ನಡೆದ ದಿಢೀರ್ ರಸ್ತೆ ತಡೆಯಿಂದಾಗಿ ಕೆಲ ಕಾಲ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ವೀರಾಜಪೇಟೆ ಸಿಪಿಐ ಶ್ರೀಧರ್ ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್ ಹಾಗೂ ಸಿಬ್ಬಂದಿಗಳು ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿದರು. ನಂತರ ರೈತರು ಪ್ರತಿಭಟನೆಯನ್ನು ಸಮೀಪದ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗಕ್ಕೆ ಸ್ಥಳಾಂತರಿಸಿದರು. ಅಧಿಕಾರಿಗಳು ಹಾಗೂ ರೈತ ಮುಖಂಡರು ಚರ್ಚಿಸಿ ಅಂತಿಮವಾಗಿ ತಿಂಗಳೊಳಗೆ ಕಾಮಗಾರಿ ಆರಂಭಿಸುವ ಭರವಸೆ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪುಚ್ಚಿಮಾಡ ಸುನೀಲ್, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಸೇರಿದಂತೆ ರೈತ ಮುಖಂಡರಾದ ಮಲ್ಚೀರ ಅಶೋಕ್, ಗಿರೀಶ್, ತೀತರಮಾಡ ರಾಜ, ಚೆಪ್ಪುಡೀರ ಕಿರಣ್, ಪಡಿಜ್ಞರಂಡ ಗಿರೀಶ್, ಕಾಕೇರ ರವಿ, ಗಾಡಂಗಡ ಉತ್ತಯ್ಯ, ಮೂಕಳೇರ ಕುಶಾಲಪ್ಪ, ಕೋಳೇರ ಭಾರತಿ, ಪುಚ್ಚಿಮಾಡ ಶಿಲ್ಪ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಾದ ಕೆ.ಎಂ.ರಾಜು, ಕೃಷ್ಣಕುಮಾರ್, ನವೀನ್, ದಿವಾಕರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.