ವೀರಾಜಪೇಟೆ, ನ. ೭: ರೈತರಿಗೆ ಸರ್ಕಾರಿ ಸೌಲಭ್ಯಗಳು ದೊರಕುತ್ತಿಲ್ಲ. ಅಧಿಕಾರಿಗಳು ರೈತರನ್ನು ಕಡೆಗಣಿಸುತ್ತಿರುವುದರಿಂದ ತಾ. ೧೨ ರಂದು ರೈತ ಸಂಘದ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ನಿಯೋಗ ತೆರಳುವ ನಿರ್ಧಾರ ಕೈಗೊಳ್ಳುವುದಾಗಿ ಅಮ್ಮತ್ತಿ ರೈತ ಸಂಘದ ಗೌರವ ಅಧ್ಯಕ್ಷ ಕಾವಾಡಿಚಂಡ ಯು. ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಮ್ಮತ್ತಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ರೈತ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅನೇಕ ಕೃಷಿಕರು ಮಾತನಾಡಿ ಈಗಾಗಲೇ ಕಾಫಿ ಕುಯ್ಯುವ ಸಮಯ ತೋಟದ ಕೆಲಸಕ್ಕೆಂದು ಅಸ್ಸಾಂ ಮತ್ತು ಬಾಂಗ್ಲಾ ದೇಶದಿಂದ ಕಾರ್ಮಿಕರು ಬರುತ್ತಿದ್ದು, ಅವರ ಬಗ್ಗೆ ರೈತರು ಎಚ್ಚರದಿಂದ ಇರಬೇಕಾಗಿದೆ. ಕೆಲವರು ನಕಲಿ ಗುರುತಿನ ಚೀಟಿ ತೋರಿಸಿ ನಮಗೆ ಮೋಸ ಮಾಡುತ್ತಿದ್ದಾರೆ.

ನಮಗೆ ಆಧಾರ್ ಕಾರ್ಡ್ ಮುಖ್ಯವಾಗಿದೆ ಹಾಗೂ ಇನ್ನು ಕೆಲವು ಕಾರ್ಮಿಕರು ತೋಟದ ಕೆಲಸಕ್ಕೆ ತಡವಾಗಿ ಬಂದು ೩.೩೦ ಗಂಟೆಗೆ ಹೋಗುತ್ತಾರೆ ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದ್ದು, ಇನ್ನು ಮುಂದೆ ೮.೩೦ ರಿಂದ ೪ ಗಂಟೆವರೆಗೂ ಕೆಲಸ ಮಾಡಬೇಕು (ಮಧ್ಯಾಹ್ನ ಒಂದು ಗಂಟೆ ವಿಶ್ರಾಂತಿ) ಎಂದು ಸಭೆ ತೀರ್ಮಾನಿಸಿತು. ಭತ್ತ ಬೆಳೆಯುವವರಿಗೆ ಕೃಷಿ ಇಲಾಖೆ ನೀಡುತ್ತಿರುವ ಟಾರ್ಪಲ್ ತೀರ ಕಳಪೆಯಾಗಿರುವುದಾಗಿ ಸಭೆಯಲ್ಲಿ ಪ್ರಸ್ತಾಪವಾಯಿತು.

ತಾಲೂಕು ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರು ಮಾತನಾಡಿ, ಸರ್ಕಾರದ ಅನುದಾನ ಮತ್ತು ಯೋಜನೆಗಳು ರೈತರಿಗೆ ತಲುಪುತ್ತಿಲ್ಲ. ಆದ್ದರಿಂದ ರೈತರುಗಳೆಲ್ಲ ಒಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘದ ಸದಸ್ಯರುಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ.

ಅಧಿಕಾರಿಗಳು ಹಣ ಇಲ್ಲದೆ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ಕೃಷಿಕರು ಎಚ್ಚರದಿಂದ ಇರಬೇಕು. ಅಮ್ಮತ್ತಿ-ಒಂಟಿಯAಗಡಿ ಮಧ್ಯೆ ಮುಖ್ಯರಸ್ತೆಗೆ ಸೇತುವೆ ನಿರ್ಮಿಸಿ ಕಳೆದ ಮೂರು ವರ್ಷಗಳಿಂದ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಇದನ್ನು ಕೇಳುವರೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕಾವಾಡಿಚಂಡ ಗಣಪತಿ ಅವರು ಮಾತನಾಡಿ, ಅನೇಕ ವರ್ಷಗಳಿಂದ ಸಂಘವನ್ನು ನಡೆಸಿಕೊಂಡು ಬರುತ್ತಿದ್ದು, ಇನ್ನು ಮುಂದೆ ಸಂಘವನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು. ಇನ್ನು ಕೆಲವು ಸದಸ್ಯರು ಕಾಡಾನೆಗಳು ಗದ್ದೆಗೆ ದಾಳಿ ನಡೆಸಿ ಬೆಳೆ ನಷ್ಟ ಪಡಿಸಿದರೂ ಅರಣ್ಯ ಇಲಾಖೆ ಪರಿಹಾರ ನೀಡುವುದಾಗಿ ಹೇಳಿ ಹಲವಾರು ದಿನಗಳು ಕಳೆದ ನಂತರ ಪರಿಹಾರ ನೀಡಲು ವಿಳಂಬ ಮಾಡುತ್ತಿದ್ದಾರೆ. ಇಲಾಖೆ ವಿರುದ್ದ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸಭೆಯಲ್ಲಿ ರೈತ ಸಂಘದ ಉಪಾಧ್ಯಕ್ಷ ಕುಟ್ಟಂಡ ಚಿಣ್ಣಪ್ಪ ಹಾಗೂ ಮಾಚಿಮಂಡ ಜಯ ಉತ್ತಪ್ಪ, ಗೌರವ ಕಾರ್ಯದರ್ಶಿ ಮನೆಯಪಂಡ ಗೌತಮ್, ಜಂಟಿ ಕಾರ್ಯದರ್ಶಿ ಪಳೆಯತಂಡ ಹರಿ, ಖಜಾಂಚಿ ಪಟ್ಟಡ ಬಿ. ಚಂಗಪ್ಪ, ಸಂಚಾಲಕ ಮಂಡೆಪAಡ ಸಿ. ವಿಜಯ, ಕಾನೂನು ಸಲಹೆಗಾರ ಬಿದ್ದಂಡ ಸುಬ್ಬಯ್ಯ ಅವರುಗಳು ವೇದಿಕೆಯಲ್ಲಿದ್ದರು.

ಸಭೆಯಲ್ಲಿ ನೆಲ್ಲಮಕ್ಕಡ ದರಮ್, ವಿಜಯ್, ಸೋಮಯ್ಯ, ಕುಟ್ಟಂಡ ಪ್ರಿನ್ಸ್, ಕಾವಾಡಿಚಂಡ ಪೂಣಚ್ಚ, ಕೋಡಿಮಣಿಯಂಡ ವಿಶ್ವನಾಥ್, ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಅಮ್ಮತ್ತಿ, ಕಾವಾಡಿ, ಕಾರ್ಮಾಡು, ಕುಂಬೇರಿ, ಬಿಳುಗುಂದ, ಹೊಸೂರು, ಬೆಟ್ಟಗೇರಿ, ಕಳತ್ಮಾಡು, ಹಚ್ಚಿನಾಡು, ಮಾಲ್ದಾರೆ, ಕಣ್ಣಂಗಾಲ, ಇತರೆಡೆಗಳಿಂದಲೂ ರೈತರು ಭಾಗವಹಿಸಿದ್ದರು.