ಹೊದ್ದೂರು, ನ. ೭: ಮೂಲನಿವಾಸಿಗಳನ್ನು ತುಳಿಯಲು ಶ್ರಮಿಸುವವರಿಗೆ ಒಗ್ಗಟ್ಟಿನ ಮೂಲಕ ತಕ್ಕಪಾಠ ಕಲಿಸುವ ಅಗತ್ಯವಿದೆ. ಇಂತಹ ಮಾರಕ ಶಕ್ತಿಗಳು ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುವ ಕಾರ್ಯದಲ್ಲಿ ನಿರತವಾಗಿವೆ. ಇವುಗಳ ಬಗ್ಗೆ ಜನತೆ ಜಾಗೃತರಾಗಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಅಭಿಪ್ರಾಯಿಸಿದರು.
ಹೊದ್ದೂರಿನ ಕೂಡಂಡ ಐನ್‌ಮನೆಯಲ್ಲಿ ಇತ್ತೀಚೆಗೆ ನಡೆದ “ಗುರುಕಾರೋಣರಿಗೆ ಮೀದಿ-ಸನ್ಮಾನ ಸಮಾರಂಭ ಆಯೋಜಿತವಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.
ಈ ಸಂದರ್ಭ ಎರಡು ಬಾರಿ ಸತತ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು. ಕುಟುಂಬದಲ್ಲಿ ಪೂಜಾರಿಯಾಗಿ ೪೨ ವರ್ಷ ಸೇವೆ ಸಲ್ಲಿಸಿದ್ದ ಅಪ್ಪಣ್ಣ ಅವರನ್ನು ಗೌರವಿಸಲಾಯಿತು. ಅಪ್ಪಣ್ಣ ಗೈರಾಗಿದ್ದರಿಂದ ಅವರ ಪರವಾಗಿ ಪುತ್ರ ಶಂಭು ಸನ್ಮಾನ ಸ್ವೀಕರಿಸಿದರು.
ಸಾಬಾ ಸುಬ್ರಮಣಿ, ಸಭಾಧ್ಯಕ್ಷತೆ ವಹಿಸಿದ್ದ ಕಮಿಟಿ ಅಧ್ಯಕ್ಷ ವಸಂತ್ ಮಾತನಾಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಬಾನು ಕಾವೇರಪ್ಪ, ಪ್ರಭಾರ ಪಟ್ಟೇದಾರ ಪೆಮ್ಮಯ್ಯ, ಮಹಿಳಾ ಕೂಟದ ಅಧ್ಯಕ್ಷೆ ರತಿ ಪೆಮ್ಮಯ್ಯ, ಅಂಬಾಡಿರ ಕಾಳಪ್ಪ, ಪಾಪು ಮೊಣ್ಣಪ್ಪ, ನಂಜೇಶ್ ಉಪಸ್ಥಿತರಿದ್ದರು. ಸುವೀನಾ-ಜಸ್ಮಿತಾ ಪ್ರಾರ್ಥಿಸಿ, ಸೋಮಣ್ಣ ವಂದಿಸಿದರು. ರವಿ ನಿರೂಪಿಸಿ, ವಂದಿಸಿದರು.