*ಗೋಣಿಕೊಪ್ಪ, ನ. ೭ : ಪ್ರತಿ ನಗರ, ಗ್ರಾಮಗಳ ಬೀದಿಗಳನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರ ತ್ಯಾಗದ ಸೇವೆಯನ್ನು ಪರಿಗಣಿಸಿ ಕೊಡಗು ಜಿಲ್ಲೆಯಾದ್ಯಂತ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ತಾ. ೧೪ರಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಬದುಕು ಇಂದಿಗೂ ಹಸನಾಗಿಲ್ಲ. ಆರೋಗ್ಯ, ಶಿಕ್ಷಣ, ವಸತಿ, ವೇತನ, ಭದ್ರತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪೌರ ಕಾರ್ಮಿಕರ ಅಭಿವೃದ್ದಿಗಾಗಿ ವಿಶೇಷ ಅನುದಾನವನ್ನು ಒದಗಿಸಿಕೊಡುವ ಚಿಂತನೆಗೆ ಮುಂದಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಪೌರ ಕಾರ್ಮಿಕರನ್ನು ಜಿಲ್ಲೆಯಾದ್ಯಂತ ಗೌರವಿಸುವ ಕಾರ್ಯಕ್ಕೆ ತಾ. ೧೪ರಂದು ಸಾಂಕೇತಿಕವಾಗಿ ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗುತ್ತಿದೆ. ನಂತರ ಹಂತ ಹಂತವಾಗಿ ಜಿಲ್ಲೆಯ ೫ ತಾಲೂಕುಗಳಲ್ಲಿ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗುವುದು. ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಿಂದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗುವುದು. ದಲಿತ ಸಮುದಾಯದವರು ತಮ್ಮ ಹಕ್ಕಿಗಾಗಿ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆನೀಡಿದ್ದಾರೆ.
ತಾ. ೧೪ರಂದು ಗೋಣಿಕೊಪ್ಪ ಮಾರುಕಟ್ಟೆ ಆವರಣದಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನಡೆಯಲಿದ್ದು, ಶಾಸಕ ಕೆ.ಜಿ. ಬೋಪಯ್ಯ ಅವರು ನೆರವೇರಿಸಲಿದ್ದಾರೆ. ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ ಕೆರೆಗೂಡು ಹಾಗೂ ಇತರ ಮುಖ್ಯ ಅತಿಥಿಗಳು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಸತೀಶ್ಸಿಂಗಿ, ಕೋಶಾಧಿಕಾರಿ ಮಹದೇವ್ ಉಪಸ್ಥಿತರಿದ್ದರು.