ಕಾವೇರಿ ಕೋಟ್ಯಂತರ ಜನರಿಗೆ ಕುಡಿಯುವ ಜಲದಾಯಿನಿ,
ರೈತರ ಕುಟುಂಬಗಳಿಗೆ ನೀರಾವರಿ ಅಮೃತಪ್ರದಾಯಿನಿ
ಕಾವೇರಿ ಪವಿತ್ರಳೂ, ಭಕ್ತರ ಪಾಪ ಪರಿಹಾರಕಳೂ, ದೈವೀ ಶಕ್ತಳು ಎಷ್ಟು ನಿಜವೋ ಅಷ್ಟೇ ಪ್ರಮಾಣದಲ್ಲಿ ಆಕೆ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಕೋಟ್ಯಂತರ ರೈತರ ಆಪದ್ಬಾಂಧವಳೂ, ನಿವಾಸಿಗಳ ಬಾಯಾರಿಕೆ ಇಂಗಿಸುವವಳೂ, ಜಲ ವಿದ್ಯುತ್ ಮೂಲಕ ಬೆಳಕಿನ ಭಾಗ್ಯವಂತಳೂ ಹೌದು. ಹಾಗಾಗಿ ಕಾವೇರಿ ನಮಗೆ ಬೇಕು, ನಮಗೆ ಬೇಕು ಎಂದು ರಾಜ್ಯ ರಾಜ್ಯಗಳಲ್ಲಿ ವಿವಾದಗಳು ನಡೆಯುತ್ತಿದೆ. ಇತ್ತೀಚೆಗಷ್ಟೆ ಕಿಂಚಿತ್ ಪ್ರಮಾಣದಲ್ಲಿ ಈ ವಿವಾದ ನಿಧಾನವಾಗಿ ಶಾಂತಗೊಳ್ಳುತ್ತಿದೆ ಎನ್ನಬಹುದು. ಈ ಕುರಿತಾಗಿ ಮಾಹಿತಿ ಇಲ್ಲಿದೆ. ಆಧಾರ: ಜಲಸಂಪನ್ಮೂಲ ಇಲಾಖಾ ಪ್ರಕಟಣೆಗಳು ಹಾಗೂ ಇತರ ಅಧಿಕೃತ ಮೂಲಗಳು.
ಕಾವೇರಿ ನದಿ ನೀರು ವಿವಾದಕ್ಕೆ ಶತಮಾನಗಳ ಇತಿಹಾಸವಿದೆ. ೧೮೯೨ ಮತ್ತು ೧೯೨೪ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಮಾಡಿಕೊಂಡ ಎರಡು ಒಪ್ಪಂದಗಳಿAದ ವಿವಾದ ಪ್ರಾರಂಭವಾಯಿತು. ಅದು ೧೯ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಕಾಲ. ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಸಂಸ್ಥಾನಗಳು ಆಂಗ್ಲರ ಆಳ್ವಿಕೆಗೆ ಒಳಪಟ್ಟಿದ್ದವು. ಕಾವೇರಿ ನದಿ ನೀರಿನ ಬಳಕೆ ಕುರಿತು ಆಂಗ್ಲರು ಹಲವು ಯೋಜನೆಗಳನ್ನು ರೂಪಿಸಿದ್ದರು. ಇದೇ ವೇಳೆ ಬರಗಾಲ ಪ್ರಾರಂಭವಾಯಿತು. ಈ ಯೋಜನೆ ಗಳೆಲ್ಲ ಜಾರಿಯಾಗದೆ ನೆನೆಗುದಿಗೆ ಬಿದ್ದವು. ೧೮೮೧ರಲ್ಲಿ ಮೈಸೂರು ಸಂಸ್ಥಾನವು ಮತ್ತೆ ಅಖಾಡಾಕ್ಕೆ ಇಳಿಯಿತು. ಕಾವೇರಿ ನದಿ ನೀರನ್ನು ಬಳಸುವ ವಿಚಾರದಲ್ಲಿ ಕೆಲವು ನೂತನ ಯೋಜನೆಗಳನ್ನು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಲಾಯಿತು. ಅಷ್ಟರಲ್ಲಿ ಮೈಸೂರು ಬ್ರಿಟಿಷ್ ಆಡಳಿತ ಸಂಸ್ಥಾನ ಬೇರ್ಪಟ್ಟು ಮರಳಿ ಆಡಳಿತ ವ್ಯವಸ್ಥೆಯು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು. ಈ ನಡುವೆ ಮದ್ರಾಸ್ ಸಂಸ್ಥಾನದ ಆಡಳಿತ ಮಾತ್ರ ಬದಲಾವಣೆ ಗೊಳ್ಳದೆ ಬ್ರಿಟಿಷರ ಆಡಳಿತವೇ ಮುಂದುವರಿಯಿತು.
ಆಗ ಮೈಸೂರು ಅರಸು ಮನೆತನದ ಆಡಳಿತವು ಕಾವೇರಿ ನೀರಿನ ಸಮರ್ಪಕ ಬಳಕೆಗೆ ಮುಂದಾಯಿತು, ಆದರೆ ಬ್ರಿಟಿಷ್ ಆಡಳಿತಾಧೀನದ ಮದ್ರಾಸ್ ಸಂಸ್ಥಾನವು ಇದಕ್ಕೆ ಸಮ್ಮತಿ ನೀಡಲಿಲ್ಲ; ವಿರೋಧ ವ್ಯಕ್ತಪಡಿಸಿತು. ಈ ಗಹನ ಗಂಭೀರ ಸಮಸ್ಯೆಯ ಪರಿಹಾರಕ್ಕೆ ಮಾತುಕತೆಯೇ ಅಸ್ತç ಎಂದು ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳು ಭಾವಿಸಿದವು. ೧೮೯೦ರಲ್ಲಿ ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳ ಪ್ರಮುಖರು ಒಂದೆಡೆ ಸೇರಿ ಮಾತುಕತೆ ನಡೆಸಿದರು. ಆಗ ಕೈಗೊಂಡ ಕೆಲವು ಪ್ರಮುಖ ತೀರ್ಮಾನಗಳು ತಕ್ಷಣ ಜಾರಿಗೊಳ್ಳಲಿಲ್ಲ. ಸುಮಾರು ೨ ವರ್ಷಗಳ ನಂತರ ಅಂದರೆ ೧೮೯೨ರಲ್ಲಿ ಎರಡು ಆಡಳಿತಗಳು ಒಪ್ಪಂದವೊAದಕ್ಕೆ ಸಹಿ ಹಾಕಿದವು. ಒಪ್ಪಂದಕ್ಕೇನೋ ಎರಡೂ ಕಡೆ ಸಹಿಯಾಯಿತು. ಆದರೆ, ಬಳಿಕ ಅದರಿಂದ ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಯಿತಷ್ಟೆ. ಈ ಒಪ್ಪಂದದ ಅನ್ವಯ ಕಾವೇರಿ ನೀರಿನ ಹರಿಯುವಿಕೆಯಲ್ಲಿ ಮೈಸೂರು ಆಡಳಿತಕ್ಕೆ ಕಡಿಮೆ ಸ್ವಾತಂತ್ರ್ಯವಿದ್ದು ಮದ್ರಾಸ್ ಸಂಸ್ಥಾನಕ್ಕೆ ಪೂರ್ಣಾಧಿಕಾರ ನೀಡಲಾಗಿತ್ತು.
ಕನ್ನಂಬಾಡಿಯಲ್ಲ್ಲಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಬಗ್ಗೆ ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಲೋಚಿಸಿದರು. ಮೇಧಾವಿ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಿದರು. ೪೧.೫ ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಇದಾಗಿತ್ತು. ಆದರೆ ಇದರಿಂದ ನೀರಿನ ಹರಿವು ಕಡಿಮೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಈ ಯೋಜನೆಗೆ ಮದ್ರಾಸ್ ಸಂಸ್ಥಾನ ತೀವ್ರ ವಿರೋಧ ವ್ಯಕ್ತಪಡಿಸಿತು. ಅಲ್ಲದೆ, ಮೆಟ್ಟೂರು ಬಳಿ ತಾನೂ ಒಂದು ಅಣೆಕಟ್ಟೆ ನಿರ್ಮಿಸಲು ತೀರ್ಮಾನಿಸಿತು. ಅದರಲ್ಲಿ ೮೦ ಟಿಎಂಸಿ ನೀರು ಸಂಗ್ರಹದ ಉದ್ದೇಶ ಹೊಂದಿತ್ತು. ಈ ವಿವಾದ ಬ್ರಿಟಿಷ್ ಆಡಳಿತದಲ್ಲಿದ್ದ ಭಾರತ ಸರ್ಕಾರದ ಮುಂದೆ ಬಂದಿತು. ಆ ಸಂದರ್ಭ ಸರ್ಕಾರವು ಮೈಸೂರು ಸಂಸ್ಥಾನಕ್ಕೆ ಅಣೆಕಟ್ಟು ನಿರ್ಮಿಸಲು ಅವಕಾಶ ಕೊಟ್ಟಿತು. ಆದರೆ, ಅದರಲ್ಲಿ ೧೧ ಟಿಎಂಸಿ ನೀರು ಮಾತ್ರ ಸಂಗ್ರಹಿಸಬೇಕು ಎಂದು ಸೂಚಿಸಿತು. ಅಂತೂ ವಿವಾದ ಹಾಗೆಯೇ ಮುಂದುವರೆಯಿತು.
ಆ ಬಳಿಕ ಅಲಹಾಬಾದ್ ಹೈಕೋರ್ಟ್ ನ್ಯಾ.ಸರ್ ಹೆಚ್ ಡಿ ಗ್ರಿಫಿನ್ ಹಾಗೂ ಇನ್ಸ್ಸ್ಪೆಕ್ಟರ್ ಜನರಲ್ ಆಫ್ ಇರಿಗೇಷನ್ ಇನ್ ಇಂಡಿಯಾ ಮಧ್ಯಸ್ಥಿಕೆಯಲ್ಲಿ ವಿವಾದ ಇತ್ಯರ್ಥಗೊಳಿಸಲು ಸರಕಾರ ನೇಮಕ ಮಾಡಿತು. ಈ ಬಗ್ಗೆ ೧೯೧೩ ರಲ್ಲಿ ಈ ಮಧ್ಯಸ್ಥಿಕೆಕಾರರು ವರದಿ ಸಲ್ಲಿಸಿದರು. ಇದರ ಆಧಾರದಲ್ಲಿ ೧೯೧೪ ರಂದು ಮೈಸೂರು ಸರ್ಕಾರ ತೀರ್ಪು ನೀಡಿತು. ಈ ತೀರ್ಪಿನ ಅನ್ವಯ ಮೈಸೂರಿಗೆ ಕಾವೇರಿ ಕೊಳ್ಳದಲ್ಲಿ ಕೃಷಿ ಭೂಮಿಯನ್ನು ೧,೧೦,೦೦೦ ಎಕರೆಗಿಂತ ಹೆಚ್ಚಿಸಬಾರದು ಎಂದು ಸೂಚಿಸಿ ಮದ್ರಾಸ್ ಸಂಸ್ಥಾನಕ್ಕೆ ೩,೦೧,೦೦೦ ಎಕರೆವರೆಗೂ ಹೆಚ್ಚಿಸಲಾಯಿತು. ಕೆಲ ಕಾಲದಲ್ಲಿ ಪುನಃ ಮಾತುಕತೆ ನಡೆಸಿದ ಫಲವಾಗಿ ೧೯೨೪ರಲ್ಲಿ ಹೊಸ ಒಪ್ಪಂದವೊAದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದAತೆ ಮೈಸೂರು ಸಂಸ್ಥಾನ ಕೃಷ್ಣರಾಜ ಸಾಗರ ಅಣೆಕಟ್ಟೆ ಕಟ್ಟಲು ಹಾಗೂ ಮದ್ರಾಸ್ ಸಂಸ್ಥಾನ ಮೆಟ್ಟೂರು ಆಣೆಕಟ್ಟೆ ಕಟ್ಟಲು ಪರಸ್ಪರ ನಿರ್ಧರಿಸ ಲಾಯಿತು,. ಎರಡು ರಾಜ್ಯಗಳಲ್ಲೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗ ಬಾರದೆಂದು ಸಹಮತ ವ್ಯಕ್ತಗೊಂಡಿತು. ಈ ಒಪ್ಪಂದವು ೫೦ ವರ್ಷ ಅಂದರೆ ೧೯೭೪ ರ ವರೆಗೆ ಮಾತ್ರ ಜಾರಿಯಲ್ಲಿರುವಂತೆ ಒಮ್ಮತ ಏರ್ಪಟ್ಟಿತು.
ಈ ನಡುವೆ ೧೯೫೬ರಲ್ಲಿ ರಾಜ್ಯಗಳ ಏಕೀಕರಣ ಪ್ರಕ್ರಿಯೆ ನಡೆಯಿತು. ಬಾಂಬೆ, ಕೊಡಗು ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳು ಕರ್ನಾಟಕಕ್ಕೆ ಸೇರ್ಪಡೆಗೊಂಡವು. ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಮಲಬಾರ್ ಕೇರಳ ರಾಜ್ಯವಾಗಿ ಪರಿವರ್ತಿತವಾಯಿತು. ಪುದುಚೇರಿ ನೂತನ ರಾಜ್ಯವಾಗಿ ರೂಪು ಗೊಂಡಿತು. ಆ ಬಳಿಕ ಕಾವೇರಿ ನದಿ ನೀರು ಹಂಚಿಕೆ ೪ ರಾಜ್ಯಗಳಿಗೆ ವಿಂಗಡಣೆಗೊಳ್ಳುವAತಾಯಿತು.
ಹಿಂದಿನ ಒಪ್ಪಂದ ಜಾರಿಯಲ್ಲ್ಲಿದ್ದಾಗಲೇ ಮತ್ತೆ ೧೯೭೦ರಲ್ಲಿ ಕರ್ನಾಟಕ ಮತ್ತು ಮದ್ರಾಸ್ ರಾಜ್ಯಗಳು ಕಾವೇರಿ ನದಿ ವಿಚಾರವಾಗಿ ಚರ್ಚೆ ನಡೆಸಿದವು. ಆಗ ಮಧ್ಯೆ ಪ್ರವೇಶಿಸಿದ ಕೇಂದ್ರ ಸರ್ಕಾರ ’ಕಾವೇರಿ ಸತ್ಯ ಸಂಶೋಧನಾ ಸಮಿತಿ’ಯೊಂದನ್ನು ರಚಿಸಿತು. ಸಮಿತಿಯ ಶಿಫಾರಸಿನಂತೆ ಕಾವೇರಿ ಕಣಿವೆ ಪ್ರಾಧಿಕಾರ ಸ್ಥಾಪನೆ ಮಾಡಲು ಎರಡೂ ರಾಜ್ಯಗಳು ಒಪ್ಪಿಗೆ ಸೂಚಿಸಿದವು. ಆದರೆ ಕೇಂದ್ರ ಸರ್ಕಾರದಿಂದಲೇ ಈ ಪ್ರಕ್ರಿಯೆಗೆ ಅಧಿಕೃತ ಅನುಮೋದನೆ ದೊರಕಲಿಲ್ಲ. ೧೯೭೬ರಲ್ಲಿ ಜಗಜೀವನ್ ರಾಂ ಕೇಂದ್ರ ಜಲಸಂಪನ್ಮೂಲ ಸಚಿವ ರಾಗಿದ್ದರು. ಅವರ ಸಮ್ಮುಖದಲ್ಲಿ ಉಭಯರಾಜ್ಯಗಳು ಒಂದು ಸಹಮತಕ್ಕೆ ಬಂದವು. ಈ ಒಪ್ಪಂದಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯುವ ಮುನ್ನ ತಮಿಳುನಾಡಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಯಾಯಿತು. ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದ ಬಳಿಕ ನೂತನ ಎಐಎಡಿಎಂಕೆ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿತು. ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಎಂ ಜಿ ರಾಮಚಂದ್ರನ್ ೧೯೭೬ ಹೊಸ ಒಪ್ಪಂದವನ್ನು ತಿರಸ್ಕರಿಸಿರು. ೧೯೨೪ರ ಹಳೆ ಒಪ್ಪಂದವೇ ಮುಂದುವರಿ ಯುವದಾಗಿ ಘೋಷಿಸಿದರು. ಈ ಹಳೆ ಒಪ್ಪಂದದ ಅನ್ವಯ ತಮಿಳುನಾಡಿನಲ್ಲಿ ಕಾವೇರಿ ನೀರಾವರಿ ಪ್ರದೇಶವು ೧೪,೪೦,೦೦೦ ಎಕರೆಯಿಂದ ೧೫,೮೦,೦೦೦ ಎಕರೆಗೆ ವಿಸ್ತರಣೆಗೊಂಡಿದ್ದರೆ, ಕರ್ನಾಟಕ ೧೯೨೪ರ ಒಪ್ಪಂದದ ನಿಯಂತ್ರಣಕ್ಕೆ ಒಳಗಾಗಿ ತನ್ನ ಕೃಷಿ ಭೂಮಿಯನ್ನು ೬,೮೦,೦೦೦ ಎಕರೆಗೆ ಸೀಮಿತಗೊಳಿಸುವಂತಾಯಿತು. ತಮಿಳುನಾಡಿನ ತಂಜಾವೂರು ಪ್ರಾಂತ್ಯದ ರೈತ ಸಂಘಟನೆಯು ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಇತ್ಯರ್ಥಕ್ಕಾಗಿ ೧೯೮೪ರಲ್ಲಿ ಸುಪ್ರೀಂ ಕೋರ್ಟ್ನ ಮೊರೆಹೊಕ್ಕಿತು. ನ್ಯಾಯಾಧಿಕರಣವೊಂದನ್ನು ರಚಿಸುವಂತೆ ಅರ್ಜಿಯಲ್ಲಿ ಕೋರಿಕೆ ಮುಂದಿಟ್ಟಿತು. ಸುಪ್ರೀಂಕೋರ್ಟ್ ನ್ಯಾಯಾಧಿಕರಣ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನ್ಯಾಯಾಧಿಕರಣವನ್ನು ರಚನೆ ಮಾಡಿತು.
ನೂತನ ರಚಿತ ನ್ಯಾಯಾಧಿಕರಣವು ೧೯೯೧ ರಲ್ಲಿ ತೀರ್ಪೊಂದನ್ನು ನೀಡಿ ವಾರ್ಷಿಕವಾಗಿ ೨೦೫ ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತು. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರವು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು. ಆದರೆ ಈ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ನ್ಯಾಯಾಧಿಕರಣದ ತೀರ್ಪನ್ನು ಎತ್ತಿ ಹಿಡಿಯಿತು. ಈ ನಡುವೆ, ೧೯೯೫-೯೬ ರಲ್ಲಿ ಕರ್ನಾಟಕದಲ್ಲಿ ತೀವ್ರ ಬರಗಾಲದ ದುಸ್ಥಿತಿ ಉದ್ಭವಿಸಿತು. ಆ ನಂತರ ಕೇಂದ್ರ ಸರ್ಕಾರವು ೧೯೯೭ ರಲ್ಲಿ ಕಾವೇರಿ ನದಿ ಪ್ರಾಧಿಕಾರ ಮತ್ತು ಕಾವೇರಿ ಮೇಲುಸ್ತುವಾರಿ ಸಮಿತಿ ಎರಡನ್ನೂ ರಚಿಸಿತು.
೨೦೦೭ ರ ಫೆ.೫ ರಂದು ನ್ಯಾಯಾಧಿಕರಣವು ಕಾವೇರಿ ನದಿ ಪಾತ್ರದಲ್ಲಿ ೭೪೦ ಟಿಎಂಸಿ ನೀರು ಲಭ್ಯವಿದೆ ಎಂದು ವಿಶ್ಲೇಷಿಸಿತು. ಈ ಪೈಕಿ ತಮಿಳುನಾಡಿಗೆ ೪೧೯ ಟಿಎಂಸಿ, ಕರ್ನಾಟಕಕ್ಕೆ ೨೭೦ ಟಿಎಂಸಿ, ಕೇರಳಕ್ಕೆ ೩೦ ಟಿಎಂಸಿ ಹಾಗೂ ಪುದುಚೇರಿಗೆ ೭ ಟಿಎಂಸಿ ಹಾಗೂ ೪ ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯಲು ಬಿಡುವಂತೆ ಒಂದು ಅಂತಿಮ ತೀರ್ಪು ನೀಡಿತು. ಆಶ್ಚರ್ಯವೆಂದರೆ, ಈ ಅಂತಿಮ ಐತೀರ್ಪಿನ ಅಧಿಸೂಚನೆ ೬ ವರ್ಷಗಳ ಬಳಿಕ ಅಂದರೆ ೨೦೧೩, ಫೆ.೨೦ರಂದು ಹೊರಬಿದ್ದಿತು. ಈ ಐ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳು ಮೇಲ್ಮನವಿ ಸಲ್ಲಿಸಿದ್ದವು. ಅವುಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ೨೦೧೮ರ ಫೆಬ್ರವರಿ ೧೬ ರಂದು ತೀರ್ಪು ನೀಡಿತು. ಅದರ ಅನ್ವಯ ೭೪೦ ಟಿ.ಎಂ.ಸಿ ಕಾವೇರಿ ನೀರಿನ ಪೈಕಿ ಕರ್ನಾಟಕಕ್ಕೆ ೨೮೪.೭೫ ಟಿ.ಎಂ.ಸಿ, ತಮಿಳುನಾಡಿಗೆ ೪೦೪.೨೫ ಟಿ.ಎಂ.ಸಿ, ಕೇರಳ ರಾಜ್ಯಕ್ಕೆ ೩೦ ಟಿ.ಎಂ.ಸಿ, ಪುದುಚೇರಿಗೆ ೭ ಟಿ.ಎಂ.ಸಿ, ಪರಿಸರ ರಕ್ಷಣೆಗೆ ೧೦ ಟಿ.ಎಂ.ಸಿ, ಸಮುದ್ರಕ್ಕೆ ಅನಿವಾರ್ಯ ವೇಸ್ಟೇಜ್ಗಾಗಿ ೪ ಟಿ.ಎಂಸಿ. ಎಂದು ನಿಗದಿ ಮಾಡಿತು. ಅಲ್ಲದೆ, ಅದೇ ದಿನ ಅಂತಿಮವಾಗಿ ಸುಪ್ರೀಂ ಕೋರ್ಟ್ ತೀರ್ಪೊಂದನ್ನು ನೀಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೊಂದನ್ನು (ಸಿಎಂಎ) ರಚಿಸುವಂತೆ ಸೂಚಿಸಿತು. ಆ ಮೇರೆಗೆ ೨೦೧೮ ರ ಜೂನ್ ೧ ರಂದು ಕೇಂದ್ರ ಸರಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸಿತು. ಅಲ್ಲದೆ ಆಯಾ ಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸಿ ಮೂರೂ ರಾಜ್ಯಗಳಿಗೆ ನೀರು ಬಿಡಲು ಕಾವೇರಿ ನೀರು ನಿಯಂತ್ರಣಾ ಸಮಿತಿಯನ್ನು ರಚಿಸಿತು. ಇದೀಗ ಈ ನಿಯಂತ್ರಣಾ ಸಮಿತಿಯೇ ಕಾವೇರಿ ನೀರು ಹಂಚಿಕೆಯ ಜವಾಬ್ದಾರಿಕೆ ಹೊತ್ತಿದೆ.
ಮೇಕೆದಾಟು ಯೋಜನೆಗೆ ಅಡ್ಡಗಾಲು
ಇತ್ತೀಚೆಗೆ ಕರ್ನಾಟಕ ಸರ್ಕಾರವು ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಮೇಕೆದಾಟಿನಲ್ಲಿ ಅಣೆಕಟ್ಟು ಕಟ್ಟಲು ಮುಂದಾಗಿದ್ದರೆ, ತಮಿಳುನಾಡು ಕೂಡಾ ತನ್ನ ರಾಜ್ಯದಲ್ಲಿ ೨ ಜಲವಿದ್ಯುತ್ ಯೋಜನೆಗಳನ್ನು ರೂಪಿಸಿದೆ. ತಮಿಳುನಾಡಿನ ಜಲವಿದ್ಯುತ್ ಯೋಜನೆಗಳಿಗೆ ಕರ್ನಾಟಕ ರಾಜ್ಯದ ಆಕ್ಷೇಪವೇನೂ ಇಲ್ಲವಾದರೂ ಕರ್ನಾಟಕದ ಮೇಕೆದಾಟು ಯೋಜನೆಗೆ ಮಾತ್ರ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ೯ ಸಾವಿರ ಕೋಟಿ ರೂ. ಮೊತ್ತದ ಯೋಜನೆಗೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಆದರೆ, ತಮಿಳುನಾಡು ಮಾತ್ರ, ಈ ಯೋಜನೆಗೆ ಸುತಾರಾಂ ಒಪ್ಪಲು ಸಾಧ್ಯವಿಲ್ಲ ಎನ್ನುತ್ತಿದೆ.
ಬೆಂಗಳೂರಿಗೆ ೪.೭೫ ಟಿ.ಎಂ.ಸಿ. ಕುಡಿಯುವ ನೀರಿನ ಅಗತ್ಯತೆಗಾಗಿ ೬೭.೧೬ ಟಿ.ಎಂ.ಸಿ. ಸಂಗ್ರಹ ಸಾಮರ್ಥ್ಯದ ಅಣೆಕಟ್ಟನ್ನು ಮೇಕೆದಾಟಿನಲ್ಲಿ ನಿರ್ಮಿಸಲು ಕರ್ನಾಟಕ ಸರ್ಕಾರವು ಮುಂದಾಗಿರುವುದು ತಮಿಳುನಾಡಿನ ಆಕ್ಷೇಪಕ್ಕೆ ಕಾರಣವಾಗಿದೆ. ಇದರಿಂದ ತಮಿಳುನಾಡಿನ ರೈತರಿಗೆ ನೀರಿನ ಕೊರತೆಯುಂಟಾಗುತ್ತದೆ ಎನ್ನುವುದು ಮುಖ್ಯಮಂತ್ರಿ ಸ್ಟಾಲಿನ್ ಸರ್ಕಾರದ ವಾದ. ಆದರೆ, ಪ್ರಸ್ತಾಪಿತ ಯೋಜನೆಯ ಅನ್ವಯ ತಮಿಳುನಾಡಿಗೆ ಅಗತ್ಯ ಇರುವಷ್ಟು ನೀರು ಬಿಡಲು ಈ ಯೋಜನೆಯಿಂದ ಯಾವುದೇ ಧಕ್ಕೆಯಾಗುವುದಿಲ್ಲ ಎನ್ನುವುದು ಕರ್ನಾಟಕ ಸರ್ಕಾರದ ಪ್ರತಿವಾದವಾಗಿದೆ. (ಮುಗಿಯಿತು)
-ಜಿ. ರಾಜೇಂದ್ರ, ಮಡಿಕೇರಿ.