ಮುಳ್ಳೂರು, ನ. ೬: ರೇಬಿಸ್ ಕಾಯಿಲೆಗೆ ತುತ್ತಾದ ಮನುಷ್ಯ ಮತ್ತು ಪ್ರಾಣಿ ಮರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೂ ರೇಬಿಸ್ ನಿರೋಧಕ ಲಸಿಕೆಯಿಂದ ರೇಬಿಸ್ ಕಾಯಿಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸುಳ್ಯದ ಮುಖ್ಯ ಪಶು ವೈದ್ಯಾಧಿಕಾರಿ ಮತ್ತು ವಿಷಯ ತಜ್ಞ ಡಾ. ನಿತಿನ್ ಪ್ರಭು ಹೇಳಿದರು.

ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಶನಿವಾರಸಂತೆ ರೋಟರಿ ಕ್ಲಬ್, ಸೋಮವಾರಪೇಟೆ ಪಶುಪಾಲನಾ ಇಲಾಖೆ ಮತ್ತು ಹಂಡ್ಲಿ ಗ್ರಾ.ಪಂ. ವತಿಯಿಂದ ಹಮ್ಮಿಕೊಂಡಿದ್ದ ೫ನೇ ವರ್ಷದ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ರೇಬಿಸ್ ನಿರೋಧಕ ಲಸಿಕಾ ಶಿಬಿರದಲ್ಲಿ ಅವರು ಮಾತನಾಡಿದರು. ರೇಬಿಸ್ ವೈರಾಣು ಪ್ರಾಣಿಗಳಿಂದ ಬರುವ ಕಾಯಿಲೆಯಾಗಿದ್ದು ಸಾಕು ನಾಯಿ, ಬೆಕ್ಕುಗಳು ಮನುಷ್ಯನಿಗೆ ಕಚ್ಚುವುದರಿಂದ ರೇಬಿಸ್ ಕಾಯಿಲೆ ಬರುತ್ತದೆ. ಸರಕಾರ ೨೦೩೦ಕ್ಕೆ ರೇಬಿಸ್ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಗುರಿಯನ್ನಿಟ್ಟುಕೊಂಡಿದೆ. ರೇಬಿಸ್ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಮಡಿಕೇರಿ ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ. ಮಾದಪ್ಪ ನಾಯಿ ಮರಿಯೊಂದಕ್ಕೆ ರೇಬಿಸ್ ನಿರೋಧಕ ಲಸಿಕೆ ಹಾಕುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಪಿ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗರಾಜ್, ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ. ಸತೀಶ್ ಕುಮಾರ್, ರೋಟರಿ ಕ್ಲಬ್ ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್, ಶನಿವಾರಸಂತೆ ರೋಟರಿ ಕಾರ್ಯದರ್ಶಿ ಎಂ.ಎಸ್. ವಸಂತ್ ಮುಂತಾದವರು ಇದ್ದರು.