ಕೂಡಿಗೆ, ನ. ೩ : ಕೊಡಗಿನ ಗಡಿ ಭಾಗ ಕೂಡಿಗೆ ಸಮೀಪದ ಶಿರಂಗಾಲ ಗ್ರಾಮದಲ್ಲಿ ೧೯೮೧ರಲ್ಲಿ ಪ್ರಾರಂಭಗೊAಡ ಜಿಲ್ಲೆಯ ಏಕೈಕ ಕಾವೇರಿ ಹ್ಯಾಂಡ್ ಲೂಂ ಶಾಖೆಯಾದ ಕಾವೇರಿ ಸಮೂಹ ನೇಯ್ಗೆ ಕೇಂದ್ರವು ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿ ಇದೀಗ ಬೀಳುವ ಹಂತ ತಲುಪಿದ್ದು, ನೇಯ್ಗೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಈ ಕಟ್ಟಡವು ತೀರ ಹಳೆಯ ಕಟ್ಟಡವಾದ ಕಾರಣದಿಂದ ಕಟ್ಟಡಕ್ಕೆ ಅಳವಡಿಕೆ ಮಾಡಲಾದ ಕಿಟಕಿ, ಬಾಗಿಲುಗಳು ಗೆದ್ದಲು ಹಿಡಿದಿದೆೆ. ಅಲ್ಲದೆ ಕಟ್ಟಡದ ಒಂದು ಭಾಗದ ಗೋಡೆಯು ಸಹ ಅತಿಯಾದ ಮಳೆಯಿಂದಾಗಿ ಮಳೆನೀರು ಸೋರಿಕೆಯಾಗಿ ಗೋಡೆ ಕುಸಿದು ಬಿದ್ದಿದೆ. ಕಳೆದ ಮೂರು ತಿಂಗಳುಗಳ ಹಿಂದೆ ಶಿರಂಗಾಲ ಕೈ ಮಗ್ಗ ಕೇಂದ್ರಕ್ಕೆ ಜವಳಿ ಮಂತ್ರಾಲಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಟ್ಟಡದ ವ್ಯವಸ್ಥೆಯನ್ನು ನೋಡಿ ಕೈಮಗ್ಗ ಕೆಲಸ ಸ್ಥಗಿತಗೊಳಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಇದೀಗ ನೇಯ್ಗೆ ಕೇಂದ್ರದ ಕಾರ್ಯ ಸ್ಥಗಿತಗೊಂಡಿದೆ.

ಈ ನೇಯ್ಗೆ ಕೇಂದ್ರದಲ್ಲಿ ಆರಂಭದಲ್ಲಿ ನೂರಾರು ಮಂದಿ ನೇಯ್ಗೆಯಲ್ಲಿ ತೊಡಗಿದ್ದರು. ಇತ್ತೀಚಿನ ದಿನಗಳಲ್ಲಿ ಇದೀಗ ೧೫ ಮಂದಿ ಜನ ಮಾತ್ರ ಕೆಲಸ ಮಾಡುವಂತಹ ಪ್ರಸಂಗ ಎದುರಾಗಿತ್ತು. ರಾಜ್ಯಮಟ್ಟದ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂಬುದು ಗ್ರಾಮಸ್ಥರ ಆರೋಪ ವಾಗಿದೆ. ಇದೀಗ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಟ್ಟಡಗಳು ಶಿಥಿಲಗೊಂಡಿವೆ.

ಈ ಕೇಂದ್ರದಲ್ಲಿ ಕಳೆದ ವರ್ಷಗಳಲ್ಲಿ ಅಧಿಕಾರಿಗಳು ಸಮಗ್ರವಾಗಿ ನೇಯ್ಗೆ ಮಾಡಲು ಕಚ್ಚಾ ವಸ್ತುಗಳನ್ನು ನೀಡುತ್ತಿದ್ದರು. ಸಿದ್ಧವಾದ ಬೆಡ್ ಶೀಟ್ ಮತ್ತು ಟವಲ್‌ಗಳನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಯ ಮೂಲಕ ಇಲಾಖೆ ಸಾಗಾಟ ಮಾಡಿದರೂ ಸರಿಯಾದ ಬೆಲೆಯಿಲ್ಲದೆ, ಕೈ ಮಗ್ಗದಲ್ಲಿ ನೇಯ್ಗೆ ಮಾಡುವ ನೇಕಾರರಿಗೆ ಅವರ ಕೆಲಸಕ್ಕೆ ತಕ್ಕಂತೆ ಹಣ ದೊರಕುತ್ತಿರಲಿಲ್ಲ.

(ಮೊದಲ ಪುಟದಿಂದ) ಶಿರಂಗಾಲ ಗ್ರಾಮದಲ್ಲಿ ವಿದ್ಯಾವಂತ ನಿರುದ್ಯೋಗಿ ಬಹುಜನರಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ನೇಯ್ಗೆ ಕೇಂದ್ರ ಅನುಕೂಲವಾಗಿತ್ತು. ಆದರೆ ಇದೀಗ ಈ ಬಟ್ಟೆ ಉತ್ಪಾದನಾ ಕೇಂದ್ರ ದಿನಕಳೆದಂತೆ ಶಿಥಿಲಾವಸ್ಥೆ ತಲುಪಿ ಕಟ್ಟಡ ಬೀಳುವ ಹಂತದಲ್ಲಿದೆ. ಸಂಬAಧಿಸಿದ ಇಲಾಖೆಯ ಅಧಿಕಾರಿಗಳಾಗಲಿ, ಕೈ ಮಗ್ಗ ನಿಗಮದ ರಾಜ್ಯದ ಪದಾಧಿಕಾರಿಗಳಾಗಲಿ ಇತ್ತ ಗಮನಹರಿಸದೇ ಇರುವುದರಿಂದ ಸ್ಥಳೀಯ ಯುವಕರು ಕೆಲಸ ನಿಮಿತ್ತ ಬೇರೆ ಜಿಲ್ಲೆಗಳಿಗೆ ತೆರಳುವಂತಹ ಪ್ರಸಂಗ ಎದುರಾಗಿದೆ.

ಜಿಲ್ಲೆಯಲ್ಲೇ ಏಕೈಕ ಕೇಂದ್ರವಾಗಿರುವ ಈ ಬಟ್ಟೆ ಉತ್ಪಾದನಾ ಕೇಂದ್ರವು ಉಪ ಶಾಖೆಗಳನ್ನು ಹೊಂದಿದ್ದು, ಮಡಿಕೇರಿ ಮತ್ತು ಕುಶಾಲನಗರದಲ್ಲಿ ಇದ್ದ ಶಾಖೆಗಳೂ ಮುಚ್ಚಲ್ಪಟ್ಟಿವೆ.

ಕಳೆದ ಮೂರು ತಿಂಗಳುಗಳ ಹಿಂದೆ ಶಿರಂಗಾಲ ಗ್ರಾಮದಲ್ಲಿರುವ ಕೈಮಗ್ಗ ಕೇಂದ್ರಕ್ಕೆ ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ಇಲಾಖೆಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಅತಿ ಶೀಘ್ರದಲ್ಲಿ ಬದಲಿ ವ್ಯವಸ್ಥೆ ಮಾಡಲು ಸಿದ್ಧ ಮಾಡುತ್ತೇವೆ. ಅಲ್ಲದೆ ಇಲಾಖೆಯ ವತಿಯಿಂದ ನೂತನ ಕಟ್ಟಡದ ಕಾಮಗಾರಿಯನ್ನು ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವ ಅಧಿಕಾರಿಯೂ ಸ್ಥಳ ಪರಿಶೀಲನೆ ಮಾಡಿಲ್ಲ. ಯಾವುದೆ ರೀತಿಯ ಕ್ರಮಕ್ಕೆ ಮುಂದಾಗಿಲ್ಲಾ ಎಂದು ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ ಆರೋಪಿಸಿದ್ದಾರೆ. ಕೈಮಗ್ಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಓರ್ವ ಅಧಿಕಾರಿಯು ಸಹ ನಿವೃತ್ತಿ ಹೊಂದಿದ್ದಾರೆ. ಕಚ್ಚಾ ವಸ್ತುಗಳು ಕಟ್ಟಡದÀ ಒಳಗೆ ಇದ್ದರೂ ಸಹ ಸಂಬAಧಿಸಿದ ಅಧಿಕಾರಿ ವರ್ಗದವರು ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳುವ ಹಂತಕ್ಕೆ ಬಂದಿರುವುದಿಲ್ಲಾ ಎಂದು ಸ್ಥಳೀಯ ನೇಕಾರರು ದೂರಿದ್ದಾರೆ.

ಜಿಲ್ಲೆಯ ಏಕೈಕ ಕೈಮಗ್ಗವಾಗಿರುವ ಶಿರಂಗಾಲದ ಈ ಘಟಕವನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಮತ್ತು ರಾಜ್ಯದ ಮಟ್ಟದ ಅಧಿಕಾರಿಗಳು ಕಾಯೋನ್ಮುಖರಾಗ ಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ.