ನಾಪೋಕ್ಲು, ನ. ೩: ಸಮೀಪದ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳೆದು ನಿಂತ ಭತ್ತದ ಬೆಳೆಗೆ ಕಾಡಾನೆಗಳು ಧಾಳಿ ಮಾಡಿ ಬೆಳೆ ನಷ್ಟವಾಗಿದೆ ಎಂದು ಗ್ರಾಮದ ಪೊಕ್ಕುಳಂಡ್ರ ಪೂಣಚ್ಚ ಅಳಲು ತೋಡಿಕೊಂಡಿದ್ದಾರೆ. ಕಾಡಾನೆಗಳು ನಿರಂತರವಾಗಿ ಹಿಂಡುಹಿAಡಾಗಿ ಬಂದು ಬೆಳೆಯನ್ನು ತಿಂದು, ತುಳಿದು ಗದ್ದೆಯಲ್ಲಿ ಓಡಾಡಿ ನಷ್ಟವನ್ನುಂಟು ಮಾಡಿದೆ. ಹೇಗೋ ಕಷ್ಟಪಟ್ಟು ಬೆಳೆ ಬೆಳೆದರೂ ಈಗ ಕದಿರು ಬರುವ ಸಮಯಕ್ಕೆ ಈ ರೀತಿಯಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದ ರೀತಿ ಆಗಿದೆ ಎಂದು ನೊಂದು ನುಡಿಯುತ್ತಾರೆ ಪೂಣಚ್ಚ.
ಗದ್ದೆಗಳು ಮಾತ್ರವಲ್ಲದೆ ಈ ಭಾಗದ ರೈತರ ತೋಟಗಳು ಆನೆಗಳ ಧಾಳಿಗೆ ತುತ್ತಾಗಿವೆ. ತೋಟದಲ್ಲಿನ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿವೆ. ತೋಟ, ಗದ್ದೆಯಲ್ಲಿ ಅಳವಡಿಸಿದ ಪೈಪ್ ಲೈನ್‌ಗಳನ್ನು ಹಾಳುಗೆಡವಿದೆ. ಕಾಡಾನೆಗಳ ಹಾವಳಿಯಿಂದ ಈ ಭಾಗದ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಸಂಚರಿಸಲು ಭಯಪಡುವಂತಾಗಿದೆ. ಸರ್ಕಾರ ಕೂಡಲೇ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು. ಸಂಬAಧಿಸಿದ ಅರಣ್ಯ ಇಲಾಖೆಯವರು ಆದ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಒದಗಿಸಿಕೊಟ್ಟು ಕಾಡಾನೆಗಳನ್ನು ಕಾಡಿಗಟ್ಟಿ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕೆAದು ಪೊಕ್ಕುಳಂಡ್ರ ಧನೋಜ್, ತೋಟಂಬೈಲು ಅನಂತಕುಮಾರ್ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.