ಕಣಿವೆ, ನ. ೪: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿನ ಗಿರಿಜನ ಆಶ್ರಮ ಶಾಲೆಯ ಹೆಸರನ್ನು ವಾಲ್ಮೀಕಿ ಆಶ್ರಮ ಶಾಲೆಯಾಗಿ ಮಾರ್ಪಡಿಸಿರುವ ಜಿಲ್ಲಾಡಳಿತದ ಕ್ರಮವನ್ನು ತಾಲೂಕು ಬುಡಕಟ್ಟು ಕೃಷಿಕರ ಸಂಘ ಹಾಗೂ ಗಿರಿಜನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಬುಧವಾರ ಬಸವನಹಳ್ಳಿಯ ಗಿರಿಜನ ಆಶ್ರಮ ಶಾಲೆಯ ಬಳಿ ಜಮಾಯಿಸಿದ ಗಿರಿಜನ ನಿವಾಸಿಗಳು ಯಾವುದೇ ಕಾರಣಕ್ಕೂ ಗಿರಿಜನ ಆಶ್ರಮ ಶಾಲೆಯ ಹೆಸರನ್ನು ಮಾರ್ಪಡಿಸಲು ಬಿಡುವುದಿಲ್ಲ. ಗಿರಿಜನರ ಅಸ್ತಿತ್ವವಾಗಿರುವ ಈ ಗಿರಿಜನ ಆಶ್ರಮ ಶಾಲೆಯನ್ನು ವಾಲ್ಮೀಕಿ ಆಶ್ರಮ ಶಾಲೆಯಾಗಿ ಪರಿವರ್ತಿಸುವ ಉದ್ದೇಶವಾದರೂ ಏನು ? ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಪ್ರಶ್ನಿಸಿದರು. ಕೊಡಗು ಜಿಲ್ಲಾ ಪಂಚಾಯಿತಿಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಇಲಾಖೆಯಡಿ ಇರುವ ಗಿರಿಜನ ಆಶ್ರಮ ಶಾಲೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕು. ವಾಲ್ಮೀಕಿ ಹೆಸರಿನಲ್ಲಿ ಬೇರೆ ಕಡೆ ಮತ್ತೊಂದು ಶಾಲೆಯನ್ನು ತೆರೆಯಲಿ ಎಂದು ಚಂದ್ರು ಹೇಳಿದರು. ಈ ಸಂದರ್ಭ ಗಿರಿಜನ ಸಹಕಾರ ಸಂಘದ ಉಪಾಧ್ಯಕ್ಷ ಮನು, ಸೋಲಿಗರ ಸಂಘದ ಅಧ್ಯಕ್ಷ ಹೆಚ್.ಹೆಚ್. ಕುಮಾರ್, ಕಾರ್ಯದರ್ಶಿ ಸುಬ್ರಮಣಿ, ಬಸವರಾಜು, ಅಣ್ಣಯ್ಯ, ಲಕ್ಷö್ಮಮ್ಮ, ರಾಜಾ ಮೊದಲಾದವರಿದ್ದರು.