ಕುಶಾಲನಗರ, ನ. ೪: ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಆನೆ ಮಾವುತನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ.

ಮಾವುತ ನವೀದ್ ಎಂಬಾತ ಅಲ್ಪ ಪ್ರಮಾಣದ ಗಾಯಗೊಂಡು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಶಿಬಿರಕ್ಕೆ ಹಿಂತಿರುಗಿದ್ದಾರೆ.

ಶಿಬಿರದ ಲವ ಎಂಬ ಆನೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮಾವುತನ ಮೇಲೆ ಎರಗಿದ್ದು ಮಾವುತ ನವೀದ್ ಕೈಗೆ ಗಾಯಗಳಾಗಿವೆ. ತಕ್ಷಣ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಯಾವುದೇ ರೀತಿಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸಾಕಾನೆ ದಿಢೀರ್ ಎರಗಲು ಕಾರಣ ಏನೆಂದು ತಿಳಿದುಬಂದಿಲ್ಲ.

- ಚಂದ್ರ ಮೋಹನ್