ಮಡಿಕೇರಿ, ನ. ೪: ಸ್ವಾತಂತ್ರö್ಯ ಅಮೃತ ಮಹೋತ್ಸವ ಪ್ರಯುಕ್ತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರು ತಿಳಿಸಿದ್ದಾರೆ.
ಮಹಿಳೆಯರು, ಮಕ್ಕಳು, ವಿಶೇಷಚೇತನರು, ಹಿರಿಯ ನಾಗರಿಕರು ಹೀಗೆ ಎಲ್ಲಾ ಜನ ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ಪ್ರತಿ ಗ್ರಾಮಗಳಲ್ಲಿನ ಶಾಲಾ ಕಾಲೇಜುಗಳ ಹಾಗೂ ವಿವಿಧ ಕಡೆಗಳಲ್ಲಿ ಸಂಘ ಸಂಸ್ಥೆಗಳ ಜೊತೆ ಕಾನೂನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ ಹಲವು ಸರ್ಕಾರಿ ಮತ್ತು ಸರ್ಕಾರೇತರ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದುವರೆಗೆ ಸುಮಾರು ೨೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೊದ್ದೇಶಗಳ ಒಳಗೊಂಡ ಕರಪತ್ರ ಮೂಲಕ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗಿರುವ ಕಾನೂನಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಜೊತೆಗೆ ಅಂಚೆ ಕಚೇರಿ ಮೂಲಕ ಸಹ ಕರಪತ್ರವನ್ನು ತಲುಪಿಸಿ ಮಾಹಿತಿ ನೀಡಲಾಗುತ್ತಿದೆ. ಕಾರಾಗೃಹದಲ್ಲಿ ಕೈದಿಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ವೃದ್ಧಾಶ್ರಮ, ಬಾಲಕ ಮತ್ತು ಬಾಲಕಿಯರ ಮಂದಿರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ತಾ. ೧೪ರ ವರೆಗೂ ಕಾನೂನಿನ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಎನ್. ಸುಬ್ರಮಣ್ಯ ಅವರು ತಿಳಿಸಿದ್ದಾರೆ.