ಮಡಿಕೇರಿ, ನ. ೪ : ಕಣ್ಮನ ಸೆಳೆಯುವ ಹೂಗಳು, ಲಕ್ಷಾಂತರ ಪುಷ್ಟಗಳಲ್ಲಿ ಅರಳುವ ಕಲಾಕೃತಿಗಳು, ಜನರನ್ನು ಸೊಜಿಗಲ್ಲಿನಂತೆ ಸೆಳೆಯುವ ‘ಫ್ಲವರ್ ಶೋ’ಗೆ ಈ ಬಾರಿಯೂ ಕೊರೊನಾ ಪರಿಸ್ಥಿತಿ ಅಡ್ಡಿಯಾಗಿದೆ. ರಾಜಾಸೀಟ್‌ನ ವೈಭವ ದುಪ್ಪಟ್ಟುಗೊಳಿಸುವ ಫಲಪುಷ್ಪ ಪ್ರದರ್ಶನ ಈ ಬಾರಿ ನಡೆಯುವುದು ಅನುಮಾನವಾಗಿದೆ.ಪ್ರತಿವರ್ಷ ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತಿತ್ತು. ಪ್ರವಾಸಿಗರ ದಂಡು ಪುಷ್ಪರಾಶಿಯ ಅಂದ ಸವಿಯಲು ಜಿಲ್ಲೆಗೆ ಆಗಮಿಸುತ್ತಿದ್ದರು. ಲಕ್ಷಾಂತರ ಬಗೆಯ ಪುಷ್ಪಗಳಲ್ಲಿ ವಿವಿಧ ಕಲಾಕೃತಿಗಳು ಜನಮನ ಸೆಳೆಯುತಿತ್ತು. ಎಂದೂ ಕಾಣದ ಹೂಗಳು ಕಂಡು ಜನರು ಪುಳಕಿತರಾಗುತ್ತಿದ್ದರು. ಆದರೆ, ಕಳೆದ ವರ್ಷದಿಂದ ‘ಫ್ಲವರ್ ಶೋ’ಗೆ ಕೊರೊನಾ ಕಾರ್ಮೋಡ ಕವಿದಿದ್ದು, ಈ ಬಾರಿಯೂ ಕಾರ್ಯಕ್ರಮ ಆಯೋಜನೆ ಬಗ್ಗೆ ಯಾವುದೇ ರೀತಿಯ ಚಿಂತನೆಯನ್ನು ಕೈಗೊಂಡಿಲ್ಲ. ರಾಜ್ಯರಾಜಧಾನಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿಯೂ ಕೂಡ ಈ ಬಾರಿ ಫ್ಲವರ್ ಶೋ ನಡೆಯುತ್ತಿಲ್ಲ. ಹಾಗಾಗಿ ಮಡಿಕೇರಿಯಲ್ಲಿಯೂ ಪ್ರದರ್ಶನ ಇಲ್ಲದಾಗಿದೆ.ಜನಮನ ಸೆಳೆಯುತ್ತಿದ್ದ ಹೂಗಳು ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ‘ಫ್ಲವರ್ ಶೋ’ ಆಯೋಜಿಸಲಾಗುತಿತ್ತು. ಜನಮನವನ್ನು ತನ್ನತ್ತ ಈ ಕಾರ್ಯಕ್ರಮ ಆಕರ್ಷಿಸುತಿತ್ತು. ಪುಷ್ಪಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೂಗಳ ಅಂದ ಆಸ್ವಾದಿಸುತ್ತಿದ್ದರು. ಜಿಲ್ಲೆಯ ಜನರು ಪುಷ್ಪಪ್ರೇಮಿಗಳಾಗಿದ್ದು ಮನೆಗಳಲ್ಲಿ ಕೈತೋಡು ಮಾಡುವುದು ಸಹಜವಾಗಿದೆ. ಈ ಕಾರ್ಯಕ್ರಮ ಅವರುಗಳಲ್ಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುತಿತ್ತು.
ಬಗೆಬಗೆಯ ಹೂಗಳಲ್ಲಿ ಕಲಾಕೃತಿ ಫ್ಲವರ್ ಶೋನ ಪ್ರಮುಖ ಆಕರ್ಷಣೆಯಾಗುತಿತ್ತು. ೨೦೧೯ರಲ್ಲಿ ಕೊಡಗಿನ ಐನ್‌ಮನೆ, ಕಾಫಿ ಕಪ್, ಕಾರ್ಟೂನ್ ಪಾತ್ರಗಳು ಸೇರಿದಂತೆ ಅನೇಕ ರೀತಿಯ ಕಲಾಕೃತಿಗಳು ಅತ್ಯುತ್ತಮವಾಗಿ ಮೂಡಿಬಂದಿದ್ದವು. ಈ ಸಂದರ್ಭ ಲಕ್ಷಾಂತರ ಜನರು ‘ಫ್ಲವರ್ ಶೋ’ ವೀಕ್ಷಿಸಿದ್ದರು. ೨೦೨೦ರಲ್ಲಿ ಕೊರೊನಾದಿಂದ ಕಾರ್ಯಕ್ರಮ ಸ್ಥಗಿತವಾಯಿತು. ಈ ವರ್ಷವೂ ಇದೇ ಪರಿಸ್ಥಿತಿ ಸೃಷ್ಟಿಯಾಗಿದೆ.
ಕಾರ್ಯಕ್ರಮ ಆಯೋಜನೆ ಸಂಬAಧ ತೋಟಗಾರಿಕೆ ಇಲಾಖೆ ಯಾವುದೇ ರೀತಿಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿಲ್ಲ. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡುತ್ತಿಲ್ಲ ಎಂಬ ಕಾರಣಕ್ಕೂ ಇಲ್ಲಿಯೂ ಯಾವುದೇ ಪ್ರಕ್ರಿಯೆಯನ್ನು ಅಧಿಕಾರಿಗಳು ಪ್ರಾರಂಭಿಸಿಲ್ಲ ಎಂದು ‘ಶಕ್ತಿ’ಗೆ ತಿಳಿದು ಬಂದಿದೆ.
ಮತ್ತೊಂದೆಡೆ ಪುಷ್ಪಪ್ರೇಮಿಗಳು ‘ಫ್ಲವರ್ ಶೋ’ ನಡೆಸಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ಬಹಿರಂಗ ಕಾರ್ಯಕ್ರಮಕ್ಕೂ ಅವಕಾಶ ನೀಡಲಾಗುತಿತ್ತು. ಈ ಕಾರ್ಯಕ್ರಮವೂ ಕೋವಿಡ್ ಮಾರ್ಗಸೂಚಿ ಅನ್ವಯ ನಡೆಸಲು ಸಾಧ್ಯವಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿ ಹೆಚ್.ಜೆ. ರಾಕೇಶ್