ಸೋಮವಾರಪೇಟೆ,ನ.೨: ತಾಲೂಕಿನ ಶಾಂತಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದ್ದು, ಇದಕ್ಕೆ ಕಾರಣಕರ್ತರಾದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವ್ಯವಹಾರದ ಹಣವನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಂಚಾಯಿತಿ ವ್ಯಾಪ್ತಿಯ ಶಾಂತಳ್ಳಿ, ಅಭಿಮಠ ಬಾಚಳ್ಳಿ, ತಲ್ತಾರೆಶೆಟ್ಟಳ್ಳಿ, ಹರಗ ವ್ಯಾಪ್ತಿಯ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಆಗಮಿಸಿ ಧರಣಿ ನಡೆಸಿದರು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಾಮಾನ್ಯ ಸಭೆ ಇಂದು ನಿಗದಿಯಾಗಿತ್ತು. ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಉಪಸ್ಥಿತರಿದ್ದರು. ಈ ಸಂದರ್ಭ ದಿಢೀರನೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಪಿಡಿಒ ಅರುಣ್ ಭಾಸ್ಕರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಎನ್‌ಆರ್‌ಇಜಿ ಪ್ರಭಾರ ಸಹಾಯಕ ನಿರ್ದೇಶಕ ರವೀಶ್, ಸಾಮಾಜಿಕ ಲೆಕ್ಕಪರಿಶೋಧಕ ದಿನೇಶ್ ಅವರಿಗೆ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿ, ಪಿಡಿಓ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಳೆದ ಆಗಸ್ಟ್ ೨೦ರಂದು ಜನರೇಟರ್ ಖರೀದಿಸಿರುವುದಾಗಿ ರೂ. ೮೦ ಸಾವಿರ ಹಣವನ್ನು ಡ್ರಾ ಮಾಡಲಾಗಿದೆ. ಆದರೆ, ಜನರೇಟರ್ ಖರೀದಿಸಿಲ್ಲ. ಬೀದಿ ದೀಪ ದುರಸ್ತಿಗೆ ಬಿಲ್ ಇಲ್ಲದೆ ೨೮ ಸಾವಿರ, ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಕಟ್ಟಿದ ಪರವಾನಗಿ ಹಣ ರೂ. ೮೮ ಸಾವಿರ, ಜನರು ಪಂಚಾಯಿತಿಗೆ ಕಟ್ಟಿದ ತೆರಿಗೆ ಹಣ ರೂ. ೪೫ ಸಾವಿರ ಸೇರಿದಂತೆ ಇತರ ಆದಾಯದಲ್ಲಿ ದುರುಪಯೋಗ ಆಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲು ಮೋಟಾರ್ ಸರಿಪಡಿಸಿರುವುದಾಗಿ ತಿಳಿಸಿ ಬೋಗಸ್ ಬಿಲ್ ಮಾಡಲಾಗಿದೆ. ಇವುಗಳಿಗೆ ಕೊಟೇಷನ್ ಕರೆದಿಲ್ಲ. ಪೈಪ್‌ಲೈನ್ ದುರಸ್ತಿಗೆ ಸಾಮಗ್ರಿ ಖರೀದಿಸಿರುವು ದಾಗಿ ಹಣ ಡ್ರಾ ಮಾಡಿದ್ದಾರೆ. ಬಿಲ್ ಹಾಜರು ಪಡಿಸಿಲ್ಲ. ಪಂಚಾಯಿತಿ ವತಿಯಿಂದ ಅನೇಕ ಕಾಮಗಾರಿಗಳ ಬಗ್ಗೆ ಅಳತೆ ಪುಸ್ತಕದಲ್ಲಿ ದಾಖಲಿಸಿಲ್ಲ ಮತ್ತು ಕೊಟೇಷನ್ ಕರೆಯದೆ ಹಣ ಪಡೆಯಲಾಗಿದೆ ಎಂದು ಮಾಜಿ ಅಧ್ಯಕ್ಷ ಬಗ್ಗನ ಅನಿಲ್, ಕೆ.ಟಿ. ರಾಜಶೇಖರ್, ಗ್ರಾಮಸ್ಥರಾದ ಬಿ.ಎನ್. ಬಿದ್ದಪ್ಪ ದೂರಿದರು.
ಗ್ರಾಮಸ್ಥರು ನೀಡಿದ ದೂರನ್ನು ಸ್ವೀಕರಿಸಿದ ಎನ್‌ಆರ್‌ಇಜಿ ಪ್ರಭಾರ ಸಹಾಯಕ ನಿರ್ದೇಶಕ ರವೀಶ್, ಪಿಡಿಒ ಅರುಣ್ ಭಾಸ್ಕರ್ ಅವರಿಂದ ದಾಖಲೆಗಳನ್ನು ಕೇಳಿದರು. ತಕ್ಷಣದಲ್ಲಿ ದಾಖಲೆಗಳನ್ನು ಹಾಜರುಪಡಿಸಲು ಪಿಡಿಓ ವಿಫಲರಾದ ಹಿನ್ನೆಲೆ ಹಣ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಗ್ರಾಮಸ್ಥರಾದ ಬೀಕಳ್ಳಿ ನಂದೀಶ್, ಶಾಂತಳ್ಳಿ ಗುರುಪ್ರಸಾದ್, ಡಿ.ವಿ. ಹೂವಯ್ಯ, ಕೆ.ಟಿ. ಕೃಷ್ಣಪ್ಪ, ಪ್ರಕಾಶ್, ಎಸ್.ಜೆ. ಪರಮೇಶ್, ಎಸ್.ಜೆ. ಹೂವಯ್ಯ, ಕುಮಾರ್, ದರ್ಶನ್, ಜೀವನ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.