ಮಡಿಕೇರಿ, ನ. ೨: ಶ್ರೀಮಂಗಲ ಹೋಬಳಿಯ ಕೆ. ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಚುಮಾಡು ಪರಂಬು ಪೈಸಾರಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಮೀಸಲಿರುವ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆದಿವಾಸಿಗಳ ಭೂಮಿ ಮತ್ತು ಹಕ್ಕು ವಂಚಿತ ಹೋರಾಟ ಸಮಿತಿ ಆರೋಪಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಬಿ.ಕೆ. ಅಪ್ಪು, ಸರ್ವೆ ನಂ.೨೯/೧ ರ ೧೮ ಎಕರೆ ಜಾಗದಲ್ಲಿ ಇಪ್ಪತ್ತು ವರ್ಷದ ಹಿಂದೆ ಆದಿವಾಸಿ ಕುಟುಂಬಗಳು ವಾಸವಿದ್ದು, ತದನಂತರ ಭೂ ಮಾಲೀಕರ ದೌರ್ಜನ್ಯದಿಂದ ಆ ಮನೆಗಳನ್ನು ಬಿಟ್ಟು ಕೆಲವರು ಪಕ್ಕದ ಮಾಲೀಕರ ಲೈನ್‌ಮನೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಸದರಿ ಜಾಗ ಸರ್ಕಾರದ ಹೆಸರಿನಲ್ಲಿ ಇದೆ. ಈ ಜಾಗದಲ್ಲಿ ಸರ್ಕಾರದ ವತಿಯಿಂದ ಈ ಹಿಂದೆ ಆದಿವಾಸಿಗಳಿಗೆ ೧೮ ಮನೆಗಳನ್ನು ನಿರ್ಮಿಸಲಾಗಿವೆ. ಇತ್ತೀಚಿನ ದಿನಗಳಲ್ಲಿ ೫ ಮನೆಗಳು ಮಾತ್ರ ಇವೆೆ. ಈ ಮನೆಗಳಿಗೆ ಸರ್ಕಾರದ ವತಿಯಿಂದ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಉತ್ತಮ ರಸ್ತೆಯನ್ನು ಕೂಡ ಒದಗಿಸಿಕೊಡಲಾಗಿದೆ. ಆದರೆ ಈ ಜಾಗವನ್ನು ಅದೇ ಗ್ರಾಮದ ಭೂ ಮಾಲೀಕರು ಅತಿಕ್ರಮಿಸಿಕೊಂಡಿದ್ದು, ಇದರಿಂದ ವಸತಿ ರಹಿತರು ಕಂಗಾಲಾಗಿದ್ದಾರೆ ಎಂದರು.
ಈ ಜಾಗವನ್ನು ಬಿಡಿಸಿ ಸೂರು ರಹಿತ ಆದಿವಾಸಿಗಳಿಗೆ ವಿತರಿಸಬೇಕು. ಜಿಲ್ಲಾಧಿಕಾರಿಗಳಿಗೆ ಮೂರು ಬಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಈ ಜಾಗದ ಸರ್ವೆ ಮಾಡಲು ಜಿಲ್ಲಾಧಿಕಾರಿಗಳ ಆದೇಶವಿದ್ದರೂ ತಾಲೂಕು ಅಧಿಕಾರಿಗಳು ಸರ್ವೆಗೆ ಕ್ರಮಕೈಗೊಳ್ಳದೆ ಒತ್ತುವರಿದಾರರ ಪರವಹಿಸಿಕೊಂಡು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ದೂರಿದರು.
ಜಾಗವನ್ನು ತಕ್ಷಣದಲ್ಲಿ ಸರ್ವೆ ಮುಖೇನ ತೆರವುಗೊಳಿಸಿ ಸೂರು ಇಲ್ಲದವರಿಗೆ ಸೂರು ಒದಗಿಸಿಕೊಡುವಂತೆ ಒತ್ತಾಯಿಸಿದ ಅವರು, ತಹಶೀಲ್ದಾರ್ ಅತಿಕ್ರಮಣ ಮಾಡಿದವರ ಪರ ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಇನ್ನೂ ೫ ದಿನದ ಒಳಗಾಗಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳದಿದ್ದರೆ, ಆದಿವಾಸಿಗಳ ಭೂಮಿ ಮತ್ತು ಹಕ್ಕು ವಂಚಿತ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆ ಒಳಗೊಂಡAತೆ ಅಹೋರಾತ್ರಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಗೋಷ್ಠಿಯಲ್ಲಿ ಪೊನ್ನಂಪೇಟೆ ತಾಲೂಕು ಸಂಚಾಲಕ ಪಾಂಡಿ ಉಪಸ್ಥಿತರಿದ್ದರು.