ಸೋಮವಾರಪೇಟೆ, ನ. ೨: ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆಗೆ ವಿವಿಧ ಭಾಗಗಳಿಂದ ಸಾರ್ವಜನಿಕರು ಸಲ್ಲಿಸಿದ್ದ ೧೦೬ ಅರ್ಜಿಗಳನ್ನು ಪರಿಶೀಲನೆ ನಡೆಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಅರ್ಜಿಗಳನ್ನು ಪರಿಶೀಲಿಸಿದ ಶಾಸಕರು, ಕಳೆದ ಅನೇಕ ದಶಗಳಿಂದ ಸರ್ಕಾರಿ ಜಾಗದಲ್ಲಿ ಕೃಷಿ ಕೈಗೊಂಡಿರುವ ರೈತರು ಪೂರಕ ದಾಖಲೆಗಳಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಅಕ್ರಮ ಸಕ್ರಮ ಸಮಿತಿಯಡಿ ಅರ್ಜಿಗಳನ್ನು ಪರಿಶೀಲಿಸಿ ದಾಖಲಾತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಾAತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ನಮೂನೆ ೫೦, ೫೩ ಹಾಗೂ ೫೭ರಡಿಯಲ್ಲಿ ೫೨ ಅರ್ಜಿಗಳು, ಸೋಮವಾರಪೇಟೆ ಕಸಬಾ ಹೋಬಳಿಯಲ್ಲಿ ೪೯, ಕುಶಾಲನಗರದಲ್ಲಿ ೫ ಅರ್ಜಿಗಳು ಸಲ್ಲಿಕೆಯಾಗಿದ್ದು, ನಿಯಮಾನುಸಾರ ಪರಿಶೀಲನೆ ನಡೆಸಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿಯಿತ್ತರು. ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ತಹಶೀಲ್ದಾರ್ ಗೋವಿಂದರಾಜು, ಸದಸ್ಯರುಗಳಾದ ಕೊಮಾರಪ್ಪ, ಸುಮಾ ಸುದೀಪ್, ಕೆಂಚೇಶ್ವರ್ ಸೇರಿದಂತೆ ಕಂದಾಯ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.