ಮಡಿಕೇರಿ, ನ. ೨: ಗರಗಂದೂರಿನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿದೆ ಎಂದು ಕೊಡಗು ಜಿಲ್ಲಾ ಜೆ.ಡಿ.ಎಸ್. ಆರೋಪಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಅ. ೧೦ ರಂದು ಗರಗಂದೂರಿನ ಮಲ್ಲಿಕಾರ್ಜುನ ನಗರದಲ್ಲಿ ದ್ವಾರ ಉದ್ಘಾಟನಾ ಕಾರ್ಯಕ್ರಮದ ಸಂಜೆ ಹಾಗೂ ಮರುದಿನ ಕೆಲವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅದು ಗಲಾಟೆಗೆ ತಿರುಗಿದೆ. ನಂತರ ರಾಜಿಸಂಧಾನ ಮೂಲಕ ಪ್ರಕರಣವನ್ನು ಪೊಲೀಸರು ಇತ್ಯರ್ಥಪಡಿಸಿದ್ದರು. ಇದಾದ ಬಳಿಕವೂ ಗಲಾಟೆಯಾಗಿದೆ. ನಂತರ ಪೊಲೀಸರು ದೂರು ದಾಖಲಿಸಿಕೊಂಡು ಒಂದು ಕೋಮಿನ ೧೦ ಜನರ ಮೇಲೆ ಎಫ್.ಐ.ಆರ್. ಮಾಡಿದ್ದಾರೆ.

ಒಂದು ಕೋಮಿನವರನ್ನು ನಿರ್ಧಿಷ್ಟವಾಗಿ ಗುರಿ ಮಾಡಿ ಪ್ರಕರಣ ದಾಖಲಿಸಿರುವುದು ಖಂಡನೀಯ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಗ್ರಾ.ಪಂ. ಸದಸ್ಯ ಮುಸ್ತಾಫ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಘಟನೆ ಸಂದರ್ಭ ಅವರು ಆ ಸ್ಥಳದಲ್ಲಿಯೇ ಇರಲಿಲ್ಲ. ಅಲ್ಲದೆ ಘಟನೆ ಸಂಬAಧವಿಲ್ಲದ ೨೧ ಜನರನ್ನು ಪ್ರಕರಣದಲ್ಲಿ ಸಿಲುಕಿಸುವ ಯತ್ನವಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಶಾಂತಿ ಕದಡುವ ಸಾಧ್ಯತೆಗಳಿವೆ. ಪೊಲೀಸರು ಯಾರದ್ದೊ ಒತ್ತಡಕ್ಕೆ ಈ ರೀತಿ ನಡೆ ಅನುಸರಿಸುತ್ತಿದ್ದು, ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ನಿರಪರಾಧಿಗಳನ್ನು ಪ್ರಕರಣದಿಂದ ಕೈಬಿಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚಿಗೆ ಗ್ರಾಮದ ಕೆಲವರು ಶಾಹಿದ ಎಂಬವರ ಮನೆ ಮುಂದೆ ಪಟಾಕಿ ಸಿಡಿಸಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದು, ಈ ಬಗ್ಗೆ ದೂರು ದಾಖಲಿಸಿದ್ದರೂ ಪೊಲೀಸರು ಎಫ್.ಐ.ಆರ್. ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಪಿ.ಗಣೇಶ್, ಯುವ ಜೆಡಿಎಸ್ ವಕ್ತಾರ ರವಿಕಿರಣ್ ಎಲ್., ಪರಿಶಿಷ್ಟ ಪಂಗಡ ಘಟಕದ ನಗರಾಧ್ಯಕ್ಷ ಹೆಚ್.ಎ. ರವಿ, ಗರಗಂದೂರು ನಿವಾಸಿ ಶಾಹಿದ ಇದ್ದರು.