ಮಡಿಕೇರಿ, ನ. ೨: ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗು ೨೦೨೧ರ ವರ್ಷದಲ್ಲಿ ಬಹುತೇಕ ೧೦ ತಿಂಗಳಿನಲ್ಲಿಯೂ ಮಳೆಯ ಸನ್ನಿವೇಶವನ್ನೇ ಎದುರಿಸಿದೆ. ಈಗಾಗಲೇ ಅಕ್ಟೋಬರ್ ತಿಂಗಳು ಪೂರ್ಣಗೊಂಡು ನವೆಂಬರ್ ತಿಂಗಳು ಬಂದಿದ್ದರೂ ಹವಾಮಾನದ ವೈಪರೀತ್ಯದ ಕಾರಣದಿಂದಾಗಿ ನಿರಂತರವಾಗಿ ಮಳೆಯನ್ನು ಎದುರಿಸುವಂತಾಗಿದ್ದು, ಜಿಲ್ಲೆಯ ಜನತೆಯ ಬವಣೆ ಇನ್ನೂ ಮುಗಿದಿಲ್ಲ.
ಇದೀಗ ಅಂಕಿ ಅಂಶದ ಪ್ರಕಾರ ಪ್ರಸಕ್ತ ವರ್ಷದ ಮಳೆ ಕಳೆದ ವರ್ಷಕ್ಕಿಂತ ಹೆಚ್ಚಾಗುತ್ತಿರುವದು ಕಂಡು ಬಂದಿದೆ. ಕಳೆದ ಬಾರಿಯ ಮಳೆಗಾಲ ಒಂದು ರೀತಿಯಿದ್ದರೆ ಈ ಬಾರಿ ಜನವರಿಯಿಂದ ಈತನಕವೂ ಆಗಾಗ್ಗೆ ಮಳೆಯಾಗುತ್ತಿದ್ದು, ಇದು ಇನ್ನೂ ಮುಂದುವರಿಯುವ ರೀತಿಯ ಮುನ್ಸೂಚನೆಗಳು ಎಲ್ಲರನ್ನೂ ಚಿಂತಾಕ್ರಾAತರನ್ನಾಗಿಸುತ್ತಿದೆ.
ಮಳೆಗಾಲದ ರೀತಿಯಲ್ಲಿ ನಿರಂತರ ಮಳೆ ಇರದಿದ್ದರೂ ಏಕಾಏಕಿ ವಾತಾವರಣದಲ್ಲಿ ಬದಲಾವಣೆಯಾಗುವದು ಗುಡುಗು - ಮಿಂಚಿನ ಆರ್ಭಟದೊಂದಿಗೆ ದಿಢೀರ್ ಭಾರೀ ಮಳೆಯಾಗುತ್ತಿರುವದು ಈಗಿನ ಪರಿಸ್ಥಿತಿಯಾಗಿದೆ. ಪ್ರಸ್ತುತ ದಿನಂಪ್ರತಿ ಜಿಲ್ಲೆಯ ಒಂದಲ್ಲಾ ಒಂದು ಕಡೆ ಈ ರೀತಿಯಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಆರ್ಥಿಕತೆ ಪ್ರಮುಖವಾಗಿ ಕಾಫಿಯನ್ನು ಅವಲಂಬಿತವಾಗಿದೆ. ಅದರಲ್ಲೂ ಇದೀಗ ಅರೆಬಿಕಾ ಕಾಫಿ ಹಣ್ಣಾಗಿದ್ದು, ಈ ಬೆಳೆಗಾರರ ಪರಿಸ್ಥಿತಿ ಶೋಚನೀಯವಾಗಿದೆ.
ಕಾಫಿ ಕುಯಿಲಿನ ಕೆಲಸ ಹೇಗಪ್ಪಾ ಎಂದು ಈ ಬೆಳೆಗಾರರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಇನ್ನು ರೋಬಸ್ಟಾ ಬೆಳೆಗಾರರ ಸ್ಥಿತಿಯೂ ಬಹುತೇಕ ಇದೇ ರೀತಿಯಾಗಿದೆ. ತೋಟದ ಕೆಲಸಗಳನ್ನು ಸಕಾಲದಲ್ಲಿ ನಿರ್ವಹಣೆ ಮಾಡುವದು ಈಗಿನ ಪರಿಸ್ಥಿತಿಯಲ್ಲಿ ದುಸ್ತರವೆನಿಸಿದೆ. ನಿರಂತರವಾಗಿ ಶೀತಮಯ ವಾತಾವರಣದಿಂದಾಗಿ ಮಣ್ಣು ತೇವಾಂಶದಿAದಲೇ ಕೂಡಿದೆ. ಈ ಪರಿಸ್ಥಿತಿ ಕೇವಲ ಈ ಬಾರಿಯ ಫಸಲಿನ ಮೇಲೆ ಮಾತ್ರವಲ್ಲ ಮುಂದಿನ ವರ್ಷದ ಫಸಲಿಗೂ ಭಾರೀ ಧಕ್ಕೆಯಾಗಿದೆ. ಕಿತ್ತಳೆ - ಕರಿಮೆಣಸು ಮತ್ತಿತರ ಬೆಳೆಗಳಿಗೆ, ವ್ಯಾಪಾರ - ವಹಿವಾಟಿಗೂ ಕೂಡ ವಾತಾವರಣದ ಅಸಹಜತೆ ದುಷ್ಪರಿಣಾಮ ಬೀರುವಂತಾಗಿದೆ. ಈಗಾಗಲೇ ನಾಸಾದ ಮೂಲಕ ಬಿಡುಗಡೆಯಾಗಿರುವ ಹೇಳಿಕೆಯಲ್ಲಿ ಮುಂದಿನ ಫೆಬ್ರವರಿ ತಿಂಗಳಿನ ತನಕವೂ ಆಗಾಗ್ಗೆ ವಾಯುಭಾರ ಕುಸಿತದೊಂದಿಗೆ ಮಳೆ ಮುಂದುವರಿಯಲಿದೆ ಎಂಬ ಅಂಶ ಕೃಷಿಕರನ್ನು ಇನ್ನಷ್ಟು ಕಂಗೆಡೆಸುವAತೆ ಮಾಡಿದೆ.
ಜಿಲ್ಲೆಯ ಮಳೆ ಪ್ರಮಾಣ
ಪ್ರಸ್ತುತ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಮಳೆಯ ಪ್ರಮಾಣ ಹೆಚ್ಚಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಜನವರಿಯಿಂದ ಈತನಕ ೧೧೧.೮೯ ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೧೦೪.೭೫ ಇಂಚಿನಷ್ಟಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ಸರಾಸರಿ ೧೫೧.೬೯ ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಈ ಅವಧಿಯಲ್ಲಿ ೧೪೬.೨೧ ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಈ ಬಾರಿ ೯೫.೮೯ ಇಂಚು ಹಾಗೂ ಕಳೆದ ಬಾರಿ ೯೬.೫೦ ಇಂಚು ಸರಾಸರಿ ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲೂ ಕಳೆದ ವರ್ಷಕ್ಕಿಂತ ಅಧಿಕ ಮಳೆ ಬಿದ್ದಿದೆ. ತಾಲೂಕಿನಲ್ಲಿ ಜನವರಿಯಿಂದ ಈತನಕ ಸರಾಸರಿ ೮೮.೦೮ ಇಂಚು ಮಳೆಯಾಗಿದ್ದರೆ ಕಳೆದ ವರ್ಷ ಈ ಪ್ರಮಾಣ ೭೧.೫೫ ಇಂಚಿನಷ್ಟಾಗಿತ್ತು.
ಕಳೆದ ಹಲವು ವರ್ಷಗಳಿಂದ ವಾತಾವರಣದಲ್ಲಿನ ಏರು - ಪೇರು ಜಿಲ್ಲೆಯ ಎಲ್ಲಾ ರೀತಿಯ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತಿದೆ.