ಸೋಮವಾರಪೇಟೆ, ನ. ೨: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಇಂದಿಗೂ ಹಕ್ಕುಪತ್ರ ಪಡೆಯದ ಮಂದಿ ತಕ್ಷಣ ಹಕ್ಕುಪತ್ರಕ್ಕಾಗಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮುಂದಿನ ಮಾರ್ಚ್ ೨೦೨೨ರವರೆಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
೯೪ ಸಿ ಮತ್ತು ೯೪ ಸಿ.ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿದ ತಾಲೂಕಿನ ೧೧೩ ಮಂದಿ ಫಲಾನುಭವಿಗಳಿಗೆ ತಮ್ಮ ಕಚೇರಿ ಆವರಣದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರವು ವಾಸದ ಮನೆಯ ಜಾಗಕ್ಕೆ ದಾಖಲೆ ನೀಡಲು ಆದ್ಯತೆ ಕೊಟ್ಟಿದೆ. ಬಡವರು, ನಿರ್ಗತಿಕರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಅನೇಕ ದಶಗಳಿಂದ ದಾಖಲಾತಿಗಾಗಿ ಅಲೆಯುತ್ತಿದ್ದಾರೆ. ಇದನ್ನು ಮನಗಂಡು ರಾಜ್ಯ ಸರ್ಕಾರವೇ ೯೪ ಸಿ ಮತ್ತು ೯೪ ಸಿಸಿ ಅಡಿಯಲ್ಲಿ ಅರ್ಜಿ ಆಹ್ವಾನಿಸಿದೆ ಎಂದರು.
ಆದರೂ ಸಹ ಇಂದಿಗೂ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡು ವಾಸವಿರುವ ಸಾವಿರಾರು ಮಂದಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಸರ್ಕಾರದ ನಿಯಮಗಳು ಆಗಿಂದಾಗ್ಗೆ ಬದಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರಿ
(ಮೊದಲ ಪುಟದಿಂದ) ಜಾಗದಲ್ಲಿ ಮನೆಕಟ್ಟಿಕೊಂಡು ಹಕ್ಕುಪತ್ರ ಪಡೆಯದೇ ಇರುವ ಮಂದಿ ತಕ್ಷಣ ಅರ್ಜಿ ಸಲ್ಲಿಸಬೇಕೆಂದು ಕರೆ ನೀಡಿದರು.
ಮಾಹಿತಿ ಕೊರತೆಯಿಂದ ಅನೇಕ ಮಂದಿ ಅರ್ಜಿ ಸಲ್ಲಿಸಿಲ್ಲ. ಇದನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ಸರ್ಕಾರವು ಮುಂದಿನ ಮಾರ್ಚ್ ೨೦೨೨ರವರೆಗೆ ಕಾಲಾವಕಾಶ ಕಲ್ಪಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕರು ತಿಳಿಸಿದರು.
ಈಗಾಗಲೇ ಹಕ್ಕುಪತ್ರಕ್ಕಾಗಿ ೩ ಸಾವಿರ ಅರ್ಜಿಗಳು ಬಂದಿದ್ದು, ಹಂತ ಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದೀಗ ೧೧೩ ಮಂದಿಗೆ ಹಕ್ಕುಪತ್ರ ನೀಡಿದ್ದು, ೫೦೯ ಮಂದಿ ಸರ್ಕಾರದ ಶುಲ್ಕ ಪಾವತಿಸಲು ಬಾಕಿಯಿದೆ. ಅವರುಗಳು ಶುಲ್ಕ ಪಾವತಿಸಿದ ತಕ್ಷಣ ಹಕ್ಕುಪತ್ರ ನೀಡಲಾಗುವುದು ಎಂದು ರಂಜನ್ ಹೇಳಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಕಂದಾಯ ಇಲಾಖೆಯ ಉಮೇಶ್, ದಾಮೋಧರ್, ಮಾಚಯ್ಯ, ಕುಮಾರಿ ಸೇರಿದಂತೆ ಅಧಿಕಾರಿಗಳು, ತಾ.ಪಂ. ಮಾಜೀ ಸದಸ್ಯ ಬಿ.ಎ. ಧರ್ಮಪ್ಪ, ಪ.ಪಂ. ಮಾಜೀ ಅಧ್ಯಕ್ಷೆ ಸುಮಾ ಸುದೀಪ್,ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರಪ್ಪ, ಪ.ಪಂ. ನಾಮನಿರ್ದೇಶನ ಸದಸ್ಯ ಶರತ್‌ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.