ಮಡಿಕೇರಿ, ನ. ೨: ಕೊಡಗಿನ ಗೌಡ ಜನಾಂಗದ ಮೊದಲ ಡಾಕ್ಟರೇಟ್ ಪದವೀಧರನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೃಷಿ ವಿಜ್ಞಾನಿ ಡಾ. ಬೋಜಪ್ಪ ಅವರ ಕುರಿತು ರಚಿಸಲಾದ "ಚೈತನ್ಯದ ಚಿಲುಮೆ" ಪುಸ್ತಕವನ್ನು ಸಾಹಿತಿ ಹಾಗೂ ಬೆಂಗಳೂರಿನ ಡಾ. ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷ ಪಿ.ಸಿ. ಚಡಗ ಬಿಡುಗಡೆಗೊಳಿಸಿದರು.
ಬೆಂಗಳೂರಿನ ಆರ್.ಟಿ ನಗರದ ಪಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗೌಡ ಸಮಾಜಗಳಿಗೆ ಪಟ್ಟೆದಾರರಂತೆ ಇದ್ದು, ಸದಾ ಸಮಾಜ ಸೇವೆಯಲ್ಲೇ ನಿರತರಾಗಿರುವ ಡಾ.ಬೋಜಪ್ಪ ಅವರ ಕಾರ್ಯ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಹಾಗೂ ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಸಿ.ಆರ್. ಸತ್ಯ, ಕೊಡಗಿನ ಕುಗ್ರಾಮವಾದ ಭಾಗಮಂಡಲದ ಸಣ್ಣ ಪುಲಿಕೋಟು ಗ್ರಾಮದ ಡಾ. ಬೋಜಪ್ಪ ಅವರು ಸ್ವ-ಸಾಮರ್ಥ್ಯದಿಂದ ಕೃಷಿ ವಿಜ್ಞಾನಿಯಾದರು. ಕಿತ್ತಳೆ ಬೆಳೆಯ ಕುರಿತು ಇವರು ನಡೆಸಿದ ಸಂಶೋಧನೆ ಮಹತ್ವದ್ದಾಗಿದೆ. ಬೆಂಗಳೂರಿನ ಹೆಬ್ಬಾಳ ಕೆರೆಯ ಅಭಿವೃದ್ಧಿ ಮತ್ತು ನಗರದ ಪರಿಸರ ರಕ್ಷಣೆಯಲ್ಲಿ ಬೋಜಪ್ಪ ಅವರ ಪಾತ್ರ ಪ್ರಮುಖವಾಗಿದೆ. ಪರಿಸರ ಪ್ರೇಮಿಯಾಗಿರುವ ಇವರು ಇಳಿ ವಯಸ್ಸಿನಲ್ಲಿಯೂ ತಮ್ಮನ್ನು ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವುದು ಮಾದರಿ ಕಾರ್ಯವಾಗಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ "ಚೈತನ್ಯದ ಚಿಲುಮೆ"ಯ ಸಂಪಾದಕ ಸೂದನ ಎಸ್. ಈರಪ್ಪ, ೯೨ರ ಇಳಿವಯಸ್ಸಿನಲ್ಲಿಯೂ ಯುವ ಜನಾಂಗವೇ ನಾಚಿಕೊಳ್ಳುವಷ್ಟು ಕ್ರಿಯಾಶೀಲರಾಗಿ ಡಾ. ಬೋಜಪ್ಪ ಕಾರ್ಯ ನಿರ್ವಹಿಸುತ್ತಿದ್ದು, ಇಂದಿನ ಯುವ ಪೀಳಿಗೆ ಇವರಿಂದ ಸಾಕಷ್ಟು ಕಲಿಯಬೇಕಾಗಿದೆ ಎಂದರು.
ಕಳೆದ ಎರಡು ವರ್ಷಗಳಿಂದ ಗೌಡ ಭಾಷೆ ಶಬ್ಧ ಕೋಶ ರಚನೆಯಲ್ಲಿ ಹಗಲು-ರಾತ್ರಿ ಎನ್ನದೆ ತೊಡಗಿಸಿ ಕೊಂಡಿದ್ದಾರೆೆ. ಮುಂದಿನ ಮೇ ತಿಂಗಳಲ್ಲಿ ಇವರ ೯೩ನೇ ಹುಟ್ಟು ಹಬ್ಬಕ್ಕೆ ಶಬ್ದಕೋಶವನ್ನು ಬಿಡುಗಡೆ ಗೊಳಿಸುವುದಾಗಿ ಹೇಳಿದರು.
ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ ವಿಶ್ವ ವಿದ್ಯಾಲಯದ ಪ್ರೊ. ಡಾ. ಶ್ರೀಧರ್, ಯುವ ಸಾಹಿತಿ ಜಯರಾಂ ರಾಯಪುರ, ಬೆಂಗಳೂರು ಕೊಡಗು ಗೌಡ ಸಮಾಜದ ಮಾಜಿ ಕಾರ್ಯದರ್ಶಿ ಚೊಕ್ಕಾಡಿ ಅಪ್ಪಯ್ಯ, ಹಿರಿಯ ಸಾಹಿತಿ ಭವಾನಿ ಶಂಕರ್ ಹಾಗೂ ಡಾ. ಬೋಜಪ್ಪ ಮಾತನಾಡಿದರು. ಸಮಾರಂಭದಲ್ಲಿ ಡಾ. ಬೋಜಪ್ಪ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ ಪದವಿ ಪಡೆದ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡು ಡಾ. ಬೋಜಪ್ಪ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭ “ಚೈತನ್ಯ ಚಿಲುಮೆ”ಯ ಸಂಪಾದಕ ಸೂದನ ಈರಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.