ಸೋಮವಾರಪೇಟೆ, ನ. ೧: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ಸಮುದಾಯ ಭವನದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತೋಟಗಾರಿಕೆ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನ ಜೇನು ಕೃಷಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಜೇನು ಕೃಷಿ ವಿಷಯ ತಜ್ಞ ಡಾ. ಕೆಂಚರೆಡ್ಡಿ ಮಾತನಾಡಿ, ಜೇನು ಕೃಷಿ ಹಾಗೂ ಜೇನು ಹುಳುಗಳ ಪ್ರಾಮುಖ್ಯತೆ, ಜೇನು ಕುಟುಂಬ-ಅದರ ವಿಧಗಳು, ಸ್ಥಳೀಯ ಜೇನುಗಳು, ಪೆಟ್ಟಿಗೆ ಜೇನುಗಳು ಹಾಗೂ ಐರೋಪ್ಯ ದೇಶದ ಎಫಿಸ್ ಮೇಲಿಫೆರಾ ತಳಿಯ ಜೇನು ಹುಳುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ. ಮಂಜುನಾಥ್ ಜೆ. ಶೆಟ್ಟಿ, ತೋಟಗಾರಿಕಾ ಸಹಾಯಕ ಕೆ. ಹೇಮರಾಜ್, ಜೇನು ಕೃಷಿ ಸಹಾಯಕ ಎಸ್.ಎಸ್. ರಾಜು, ಶರತ್, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್, ಸೋಮವಾರಪೇಟೆ ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಪ್ರಗತಿಪರ ಜೇನು ಕೃಷಿಕ ಎಸ್.ಪಿ. ಜೋಯಪ್ಪ, ಕೂತಿ ಗ್ರಾಮದ ಕಾರ್ಯದರ್ಶಿ ವಿನೋದ್ ಕುಮಾರ್, ಉಪಾಧ್ಯಕ್ಷ ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.