ಗೋಣಿಕೊಪ್ಪಲು, ನ.೧ : ಹಲವು ದಶಕಗಳಿಂದ ನಡೆದುಕೊಂಡು ಬಂದಿರುವAತೆ ಆಶ್ರಮ ಶಾಲೆಯ ಹೆಸರುಗಳನ್ನು ಗಿರಿಜನರ ಹೆಸರಿನಲ್ಲಿ ಮುಂದುವರಿಸಬೇಕು; ಯಾವುದೇ ಕಾರಣಕ್ಕೂ ಗಿರಿಜನರ ಹೆಸರಿನಲ್ಲಿ ಮತ್ತೊಬ್ಬರ ಹೆಸರನ್ನು ಆಶ್ರಮ ಶಾಲೆಗಳಿಗೆ ಬಳಸದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ತಿತಿಮತಿ ಲ್ಯಾಂಪ್ಸ್ ಸೊಸೈಟಿಯ ಸಭಾಂಗಣದಲ್ಲಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನ ಬುಡಕಟ್ಟು ಕೃಷಿಕರ ಸಂಘದ ಪ್ರಬಾರ ಅಧ್ಯಕ್ಷÀ ಪಿ.ಸಿ.ರಾಮು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಗಿರಿಜನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಆಶ್ರಮ ಶಾಲೆಗಳಿಗೆ ಇದೀಗ ವಾಲ್ಮೀಕಿ ಹೆಸರಿನಲ್ಲಿ ಶಾಲೆಯ ಹೆಸರನ್ನು ಬದಲಾಯಿಸಲು ಹೊರಟಿರುವ ಸರ್ಕಾರದ ಕ್ರಮಕ್ಕೆ ಗಿರಿಜನ ಮುಖಂಡರು ವಿರೋಧ ವ್ಯಕ್ತಪಡಿಸಿದರು. ತಾಲೂಕಿನ ವಿವಿಧ ಭಾಗದ ಗಿರಿಜನ ಮುಖಂಡರು ಭಾಗವಹಿಸಿದ್ದ ಸಭೆಯಲ್ಲಿ ವಾಲ್ಮೀಕಿ ಭವನ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಆದಿವಾಸಿ ಭವನ ನಿರ್ಮಾಣದ ಬಗ್ಗೆ ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಪತ್ರ ಬರೆಯಲು ಸಭೆಯು ಒಮ್ಮತದ ನಿರ್ಧಾರಕೈಗೊಂಡಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಾಡಿಯ ಪ್ರಮುಖರಾದ ರವೀನಾ, ಪ್ರಸ್ತುತ ಸರ್ಕಾರ ಆದಿವಾಸಿಗಳ ಹೆಸರಿನಲ್ಲಿರುವ ಆಶ್ರಮ ಶಾಲೆಗಳನ್ನು ವಾಲ್ಮೀಕಿ ಹೆಸರಿನಲ್ಲಿ ಬದಲಾಯಿಸುವ ಮೂಲಕ ಮೂಲ ಗಿರಿಜನರನ್ನು ಮೂಲೆ ಗುಂಪು ಮಾಡಲು ಈ ರೀತಿಯ ನಿರ್ಧಾರಕೈಗೊಂಡಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಬಹುತೇಕ ಸಂಖ್ಯೆಯಲ್ಲಿ ಪಣಿ ಎರವ, ಪಂಜರಿಎರವ, ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ ಹಾಗೂ ಇತರ ಆದಿವಾಸಿಗಳು ಈ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಈ ಕಾರಣಕ್ಕಾಗಿಯೇ ಗಿರಿಜನರ ಹೆಸರಿನಲ್ಲಿ ಆಶ್ರಮ ಶಾಲೆಗಳನ್ನು ತೆರೆದು ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಕೊಡಗಿನಲ್ಲಿ ವಾಲ್ಮೀಕಿ ಸಮುದಾಯದ ಜನಸಂಖ್ಯೆ ವಿರಳವಾಗಿದೆ. ಆದರೆ ಇವರ ಹೆಸರನ್ನು ಆಶ್ರಮ ಶಾಲೆಗೆ ಮರು ನಾಮಕರಣ ಮಾಡುತ್ತಿರುವುದು ಸರಿಯಲ್ಲ. ವಾಲ್ಮೀಕಿ ಸಮುದಾಯ ಇರುವ ಕಡೆಗಳಲ್ಲಿ ಇವರ ಹೆಸರನ್ನು ನಾಮಕರಣ ಮಾಡಲು ನಮ್ಮ ಅಭ್ಯಂತರವಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್.ಪಂಕಜ ಮಾತನಾಡಿ ಶತಮಾನಗಳಿಂದಲೂ ಗಿರಿಜನರು ಕೊಡಗಿನ ವಿವಿಧ ಭಾಗದಲ್ಲಿ ನೆಲೆಸಿದ್ದಾರೆ. ಅರಣ್ಯವನ್ನು ದೇವರೆಂದು ಪೂಜಿಸುವವರು ನಾವುಗಳು, ವನ್ಯ ಜೀವಿಗಳೊಂದಿಗೆ ಬದುಕು ಸಾಗಿಸಿಕೊಂಡು ಬಂದಿರುವ ಗಿರಿಜನರು ಎಂದಿಗೂ ಪ್ರಾಣಿಗಳಿಗಾಗಲಿ, ಅರಣ್ಯಕ್ಕಾಗಲಿ ತೊಂದರೆ ಮಾಡಿಲ್ಲ. ಆದರೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬAಧಪಟ್ಟ ವಿಷಯದಲ್ಲಿ ಅರಣ್ಯಕ್ಕೆ ಸಂಬAಧ ಇಲ್ಲದವರ ಹೆಸರನ್ನು ಮರು ನಾಮಕರಣ ಮಾಡಲು ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಗಿರಿಜನರ ವಿರೋಧವಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಬುಡಕಟ್ಟುಜನರ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಬೇಕು.ಈ ಮೂಲಕ ಬುಡಕಟ್ಟು ಸಮುದಾಯದವರನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಬುಡಕಟ್ಟು ಕೃಷಿಕರ ಸಂಘದ ಮುಖಂಡ ಪಿ.ಎಂ.ಚುಬ್ರು ಮಾತನಾಡಿ ಗಿರಿಜನರ ಕಲ್ಯಾಣಕ್ಕಾಗಿ ಆದಿವಾಸಿ ಭವನ ನಿರ್ಮಾಣ ಮಾಡಲು ಸರ್ಕಾರ ಹಾಗೂ ಇಲಾಖೆ ಕಳೆದ ಹಲವಾರು ವರ್ಷಗಳ ಹಿಂದೆಯೇ ನಾಲ್ಕು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಆದರೆ ಭವನ ನಿರ್ಮಾಣಕ್ಕೆ ಬೇಕಾದ ಖಾಲಿ ಜಾಗವನ್ನು ಕಂಡು ಹಿಡಿಯುವಲ್ಲಿ ಇಲಾಖೆಯು ಹಿಂದೇಟು ಹಾಕಿದೆ. ಅರಣ್ಯ ಹಕ್ಕು ಹೆಸರಿನಲ್ಲಿ ಸಮುದಾಯಕ್ಕೆ ಮೀಸಲಾಗಿರುವ ಜಾಗಗಳು ಅಧಿಕವಿದ್ದು ಸೂಕ್ತ ಜಾಗದಲ್ಲಿ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಕೂಡಲೇ ಸರ್ವೆ ಕಾರ್ಯ ನಡೆಸಬೇಕು. ಅಲ್ಲದೆ ಭವನಕ್ಕೆ ಆದಿವಾಸಿಗಳ ಭವನ ಎಂದೇ ನಾಮಕರಣ ಮಾಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಕಚೇರಿಯ ಮುಂದೆ ಆದಿವಾಸಿಗಳು ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಡಳಿತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.
ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಪಿ.ಕೆ.ಮಣಿಕುಂಞ ಮಾತನಾಡಿ, ಸರ್ಕಾರ ಹಾಗೂ ಇಲಾಖೆಗಳು ಗಿರಿಜನರನ್ನು ನಿರಂತರವಾಗಿ ಶೋಷಣೆ ಮಾಡುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ವಾಸಿಸುವ ಗಿರಿಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಶ್ರಮ ಶಾಲೆಯನ್ನು ಅವಲಂಭಿಸಿದ್ದಾರೆ. ಆದರೆ ಈ ಆಶ್ರಮ ಶಾಲೆಗಳ ಹೆಸರನ್ನು ಮರು ನಾಮಕರಣಗೊಳಿಸಲು ಇಲಾಖೆ ಹಾಗೂ ಸರ್ಕಾರ ಯೋಜನೆ ರೂಪಿಸುತ್ತಿದೆ. ಇಂತಹ ನಿರ್ಧಾರವನ್ನು ಆದಿವಾಸಿಗಳು ವಿರೋಧಿಸುತ್ತೇವೆ. ಅಗತ್ಯಬಿದ್ದಲ್ಲಿ ಹೋರಾಟಕ್ಕೂ ಸಜ್ಜಾಗಿದ್ದೇವೆ. ಯಾವುದೇ ಒತ್ತಡವಿದ್ದರೂ ಈ ಹಿಂದೆ ಇದ್ದಂತೆಯೇ ಗಿರಿಜನರ ಆಶ್ರಮ ಶಾಲೆಗಳಾಗಿಯೇ ಉಳಿಯಬೇಕು ಎಂದರು.
ಗಿರಿಜನ ಮುಖಂಡ ಜೆ.ಎಂ.ಸೋಮಯ್ಯ ಮಾತನಾಡಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಅರಣ್ಯವಾಗಿ ಉಳಿಸಲು ಇಲ್ಲಿಯ ಆದಿವಾಸಿಗಳ ಶ್ರಮ ಅಪಾರವಿದೆ. ಕೇವಲ ಯಾವುದೋ ಪ್ರಭಾವಕ್ಕೆ ಒಳಗಾಗಿ ಸರ್ಕಾರ ಈ ಪ್ರದೇಶದ ಹೆಸರನ್ನು ಬೇರೆ ಹೆಸರಿಗೆ ಮರು ನಾಮಕರಣ ಮಾಡಲು ಗಿರಿಜನರ ಸಂಪೂರ್ಣ ವಿರೋಧವಿದೆ. ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇವರ ಕೊಡುಗೆ ಶೂನ್ಯವಾಗಿದೆ. ಒಂದು ವೇಳೆ ಹೆಸರನ್ನು ಬದಲಾಯಿಸಬೇಕೆಂಬ ಅವಶ್ಯಕತೆ ಕಂಡು ಬಂದಲ್ಲಿ ಗಿರಿಜನರಿಗಾಗಿಯೇ ಹೋರಾಡಿ ವೀರ ಮರಣವನ್ನಪ್ಪಿದ ಬಿರ್ಸಾಮುಂಡ ಇವರ ಹೆಸರನ್ನು ನಾಮಕರಣ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಮುಖಂಡರಾದ ಪುಷ್ಪಜ ಮಾತನಾಡಿ ಆಶ್ರಮ ಶಾಲೆಯ ಹೆಸರನ್ನು ಮರು ನಾಮಕರಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಿಗುವ ವಿದ್ಯಾಭ್ಯಾಸದಂತೆ ಆಶ್ರಮ ಶಾಲೆಯ ಮಕ್ಕಳಿಗೂ ವಿದ್ಯಾಭ್ಯಾಸ ಸಿಗುವಂತಾಗಬೇಕು. ಆಶ್ರಮ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಾಲಕಾಲಕ್ಕೆ ಅವಶ್ಯವಿರುವ ತರಬೇತಿಗಳನ್ನು ನೀಡಬೇಕು. ಅಲ್ಲದೆ ಇವರಿಗೆ ಸಿಗುವ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸುವಂತಾಗಬೇಕು ಎಂದರು.
ಸಭೆಯಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷೆ ಜೆ.ಆರ್.ಪುಷ್ಪ, ಪಿ.ಕೆ.ಸಿದ್ದಪ್ಪ, ಪಿ.ಜೆ.ಮಲ್ಲಪ್ಪ, ಜೆ.ಆರ್.ರಾಣಿ, ಪಿ.ಎಂ.ಪಾರ್ವತಿ, ರಾಮು, ಸುಬ್ರಮಣಿ, ಪಿ.ಸಿ.ಸುಬ್ರಮಣಿ, ಪಿ.ಸಿ.ಬೋಜಪ್ಪ, ಜೆ.ಕೆ.ಕಾಳ, ಜೆ.ಪಿ.ಗಣಪತಿ ಸೇರಿದಂತೆ ವಿವಿಧ ಭಾಗದ ಮುಖಂಡರು ಭಾಗವಹಿಸಿದ್ದರು. ಮುಖಂಡರಾದ ಪಿ.ಕೆ.ಸಿದ್ದಪ್ಪ ಸ್ವಾಗತಿಸಿ ಜೆ.ಆರ್. ಪುಷ್ಪ ವಂದಿಸಿದರು. -ಹೆಚ್.ಕೆ.ಜಗದೀಶ್