ಸೋಮವಾರಪೇಟೆ, ನ. ೧: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಲ್ಲಿ ತಕ್ಷಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬೇಕು. ಭ್ರಷ್ಟಾಚಾರ ನಿರ್ಮೂಲನೆಗಾಗಿ ಎಸಿಬಿಯೊಂದಿಗೆ ಕೈಜೋಡಿಸಬೇಕೆಂದು ಇಲಾಖೆಯ ಡಿವೈಎಸ್‌ಪಿ ಕೃಷ್ಣಮೂರ್ತಿ ಮನವಿ ಮಾಡಿದರು.

ಸ್ವಾತಂತ್ರ ಭಾರತ@೭೫-ಸಮಗ್ರತೆಯೊಂದಿಗೆ ಸ್ವಾವಲಂಬನೆ ಕಾರ್ಯಕ್ರಮದಡಿ ‘ಎ.ಸಿ.ಬಿ.-ಪಾರದರ್ಶಕ ಆಡಳಿತಕ್ಕಾಗಿ ಬದ್ಧ’ ಎಂಬ ಘೋಷಣೆಯೊಂದಿಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಸಾರ್ವಜನಿಕ ನೌಕರ ನ್ಯಾಯಯುತವಾಗಿ ಮಾಡಬೇಕಾದ ಸಾರ್ವಜನಿಕ ಕೆಲಸಕ್ಕೆ ಲಂಚದ ಹಣಕ್ಕಾಗಿ ಒತ್ತಾಯಿಸುವುದು, ಲಂಚಪಡೆಯುವುದು, ಲಂಚದ ರೂಪದಲ್ಲಿ ಇತರ ಪ್ರತಿಫಲ ಕೇಳುವುದು, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೆ ರೀತಿಯ ಅವ್ಯವಹಾರಗಳನ್ನು ಮಾಡುವುದು ೧೯೯೮ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧವಾಗುತ್ತದೆ ಎಂದರು.

ಈ ಸಂಬAಧ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿದ್ದು, ಯಾವುದೇ ರೀತಿಯ ದೂರುಗಳು ಹಾಗೂ ಸಾರ್ವಜನಿಕ ನೌಕರ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಜಿಲ್ಲಾ ಎಸಿಬಿ ಪೊಲೀಸ್ ಠಾಣೆಗೆ (ಡಿವೈಎಸ್‌ಪಿ: ೯೪೮೦೮೦೬೨೨೫, ಪಿ.ಐ-೯೪೮೦೮೦೬೨೮೧, ೯೪೮೦೮೦೬೨೮೨) ಮಾಹಿತಿ ನೀಡುವಂತೆ ಕೃಷ್ಣಮೂರ್ತಿ ಮನವಿ ಮಾಡಿದರು.

ಸಭೆಯಲ್ಲಿ ಎಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಸೇರಿದಂತೆ ಸಿಬ್ಬಂದಿಗಳು, ಪ.ಪಂ. ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.