ಕುಶಾಲನಗರ ಅ ೩೦: ಹುತಾತ್ಮರನ್ನು ಅವಹೇಳನ ಮಾಡುವುದರೊಂದಿಗೆ ನ್ಯಾಯಾಲಯದ ತೀರ್ಮಾನವನ್ನು ತಿರುಚಿ ನ್ಯಾಯಾಂಗ ನಿಂದನೆ ಮಾಡಿರುವುದಾಗಿ ಆರೋಪಿಸಿ ಕಾವೇರಿ ಸೇನೆ ಸಂಘಟನೆಯ ಪ್ರಮುಖ ರವಿಚಂಗಪ್ಪ ಎಂಬವರ ಮೇಲೆ ಕುಶಾಲನಗರ ಗೌಡ ಸಮಾಜ ಪೊಲೀಸ್ ದೂರು ಸಲ್ಲಿಸಿದೆ.

ಸಮಾಜದ ಪ್ರಮುಖರು ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದು, ಸ್ವಯಂಘೋಷಿತ ಸಂಘಟನೆಯ ಪ್ರಮುಖ ರವಿ ಚಂಗಪ್ಪ ಎಂಬ ವ್ಯಕ್ತಿ ಕೊಡಗು ಜಿಲ್ಲೆಯಲ್ಲಿ ಗೌಡ ಮತ್ತು ಕೊಡವ ಜನಾಂಗಗಳ ಮಧ್ಯೆ ಜನಾಂಗೀಯ ದ್ವೇಷ ಉಂಟು ಮಾಡುವ ದುರುದ್ದೇಶದಿಂದ ಮಡಿಕೇರಿ ನಗರ ಠಾಣೆಯಲ್ಲಿ ದೂರು ಸಲ್ಲಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಜನಾಂಗೀಯ ದ್ವೇಷ ಉಂಟು ಮಾಡುವ ದುರುದ್ದೇಶ ಹೊಂದಿರುವುದು ಕಂಡುಬAದಿದೆ. ನ್ಯಾಯಾಲಯ ಆದೇಶದಲ್ಲಿ ತಿಳಿಸದೆ ಇರುವಂತಹ ವಿಷಯಗಳನ್ನು ಸುಳ್ಳು ಪ್ರಚಾರ ಮಾಡಿ ನ್ಯಾಯಾಂಗ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮರಣಾರ್ಥ ಅಧಿಕೃತವಾಗಿ ಹೊರತಂದ ಅಂಚೆ ಲಕೋಟೆಯನ್ನು ನಕಲಿ ಯಂತ್ರ ಬಳಸಿ ಸರ್ಕಾರಿ ಅನುಮತಿಯಿಲ್ಲದೆ ಮುದ್ರಿಸಿ ಬಿಡುಗಡೆ ಮಾಡಲಾಗಿದೆ ಎಂದು ಅನವಶ್ಯಕ ಹೇಳಿಕೆಗಳನ್ನು ನೀಡಲಾಗುತ್ತಿದೆ. ಆ ಮೂಲಕ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಅವಹೇಳನ ಮಾಡಿ ಅವರ ಗೌರವಕ್ಕೆ ಕುಂದು ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕೊಡಗಿನ ೨ ಪ್ರಮುಖ ಜನಾಂಗಗಳಾದ ಗೌಡ ಮತ್ತು ಕೊಡವ ಜನಾಂಗದ ನಡುವೆ ಜನಾಂಗೀಯ ದ್ವೇಷ ಉಂಟು ಮಾಡುವ ರೀತಿಯ ಅರ್ಜಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಕಾನೂನುಬಾಹಿರ ಕಾರ್ಯಗಳಲ್ಲಿ ತೊಡಗಿರುವ ರವಿಚಂಗಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ರವಿ ಚಂಗಪ್ಪ ಅವರ ಮೇಲೆ ಕ್ರಮ ಕೈಗೊಂಡು ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿದ್ದಾರೆ. ಕುಶಾಲನಗರ ಡಿವೈಎಸ್ ಪಿ ಅವರಿಗೆ ದೂರು ಸಲ್ಲಿಕೆ ಸಂದರ್ಭ ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಗೌಡ ಸಮಾಜದ ಅಧ್ಯಕ್ಷರಾದ ಕೂರನ ಪ್ರಕಾಶ್, ಪ್ರಮುಖರಾದ ಪಿಎಂ ಮೋಹನ್, ಕರಂದ್ಲಾಜೆ ಆನಂದ್, ಚಿಲ್ಲನ ಗಣಿಪ್ರಸಾದ್, ಅರವಿಂದ್, ವಿನಯ್ ಕಾರ್ಯಪ್ಪ ಮತ್ತಿತರರು ಇದ್ದರು.