ಮಡಿಕೇರಿ, ಅ. ೩೧: ಮಡಿಕೇರಿ ನಗರಸಭೆ ವತಿಯಿಂದ ತಾ. ೨ ರಿಂದ ೧೮ ರವರೆಗೆ ಹೊಸ ಉದ್ದಿಮೆ ಪರವಾನಿಗೆ ನೀಡಲು ಹಾಗೂ ಪರವಾನಿಗೆಯನ್ನು ನವೀಕರಿಸಿಕೊಳ್ಳಲು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಆ ದಿನಗಳಂದು ನಗರಸಭೆ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು ಸೂಕ್ತ ದಾಖಲೆಗಳೊಂದಿಗೆ ನಗರಸಭೆಗೆ ಅರ್ಜಿ ಸಲ್ಲಿಸಿದಲ್ಲಿ, ಪರವಾನಿಗೆ/ ನವೀಕರಣ ಮಾಡಿಕೊಡಲಾಗುವುದು. ಎಲ್ಲಾ ಉದ್ದಿಮೆದಾರರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಅಥವಾ ಜಾಹೀರಾತು ಫಲಕಗಳನ್ನು ಕನ್ನಡದ ದಪ್ಪ ಅಕ್ಷರಗಳಲ್ಲೆ ಕಡ್ಡಾಯವಾಗಿ ಮುದ್ರಿಸಬೇಕಾಗಿ ಪೌರಾಯುಕ್ತರು ಉದ್ದಿಮೆದಾರರಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಉದ್ದಿಮೆ ಪರವಾನಿಗೆ ಪಡೆಯುವಂತೆ ಹಾಗೂ ನವೀಕರಣಗೊಳಿಸಿಕೊಳ್ಳಲು ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿರುತ್ತದೆ. ಪರವಾನಿಗೆ ಪಡೆಯದೆ/ ನವೀಕರಿಸದೆ ಅನಧಿಕೃತವಾಗಿ ಸರ್ಕಾರದ ಆದೇಶಗಳನ್ನು ಉಲ್ಲಂಘನೆ ಮಾಡಿ ಉದ್ದಿಮೆ ನಡೆಸುತ್ತಿರುವುದು ದಂಡನಾರ್ಹ ಅಪರಾಧವಾಗಿದ್ದು, ಪುರಸಭಾ ಕಾಯ್ದೆ ೧೯೬೪ರ ನಿಯಮ ೨೫೬ರ ಪ್ರಕಾರ ಕಾನೂನು ರೀತಿ ಕ್ರಮವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ಅವರು ತಿಳಿಸಿದ್ದಾರೆ.