ಭಿನ್ನತೆಯಲ್ಲಿ ಏಕತೆಯನ್ನು ಸಾಧಿಸುವ ಮಂತ್ರವನ್ನು ಜಗತ್ತಿಗೆ ಸಾರಿದ ಹೆಮ್ಮೆಯ ನಾಡು ನಮ್ಮದು. ನಮ್ಮದಲ್ಲದ ಭಾಷೆ ಮತ್ತು ಸಂಸ್ಕೃತಿಯನ್ನು ವಿಶಾಲ ಮನೋಭಾವದಿಂದ ಸ್ವೀಕರಿಸಿ ಯಾವುದೇ ವಿಧದ ನಿಷೇಧಾತ್ಮಕ ಭಾವಗಳಿಗೆ ಎಡೆ ಮಾಡಿಕೊಡದಂತೆ ಮುಂದೆ ಸಾಗುವುದು ಸುಲಭದ ಮಾತಲ್ಲ. ಅಪರಿಚಿತ ಜನ ಮತ್ತು ಅವರ ಆಚಾರಗಳಿಗೆ ಗೌರವ ನೀಡಬೇಕಾದರೆ ನಮ್ಮಲ್ಲಿ ವಿಶೇಷ ವ್ಯವಧಾನ ಬೇಕಾಗುತ್ತದೆ. ಸ್ವಲ್ಪ ಎಡವಿದರೂ ಗೊಂದಲ-ಗಲಭೆ ಸಹಜ. ಇದರ ಪರಿಣಾಮಗಳಿಗೆ ಪರಿಹಾರ ಇನ್ನೂ ಕಷ್ಟ. ಎರಡು ಬಲಿಷ್ಠ ಗುಂಪುಗಳ ನಡುವಿನ ನ್ಯಾಯ ತೀರ್ಮಾನದಲ್ಲಿ ಪಾಲ್ಗೊಳ್ಳಲು ಮಾನಸಿಕ ಸ್ಥಿರತೆ, ಯೋಚನಾ ಲಹರಿಯಲ್ಲಿ ಸ್ಪಷ್ಟತೆ ಕಾರ್ಯವಿಧಾನಗಳಲ್ಲಿ ಕಾಠಿಣ್ಯ ಇರಬೇಕು. ಇಂಥ ಧೀರೋದ್ದಾತ್ತ ನಾಯಕರು ನಮ್ಮ ಚರಿತ್ರೆಯ ಪುಟಗಳಲ್ಲಿ ಅಜರಾಮರರಾಗಿದ್ದಾರೆ. ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ದಿನಾಚರಣೆ ರಾಷ್ಟಿçÃಯ ಏಕತಾ ದಿವಸಕ್ಕೆ ಸ್ಫೂರ್ತಿ ಎಂದರೆ ಭಾರತದ ಏಕತೆಯ ಹಿಂದಿರುವ ಶಕ್ತಿ ಉಕ್ಕಿನದ್ದು ಎಂಬುದು ಸ್ಪಷ್ಟ. ದೇಶದ ಸಮಗ್ರತೆಗೆ ಭಂಗ ತರಲು ರಾಜ್ಯದ ವಿಲೀನಿಕರಣಕ್ಕೆ ಒಪ್ಪದೇ ಸತಾಯಿಸುತ್ತಿದ್ದ ರಾಜರ ಆಳ್ವಿಕೆಯನ್ನು ತಮ್ಮ ಕಟ್ಟುನಿಟ್ಟಿನ ಕ್ರಮಗಳ ಮೂಲಕ ದಾರಿಗೆ ತರುವಲ್ಲಿ ಸ್ವಾತಂತ್ರಾö್ಯನAತರ ಭಾರತದ ಗೃಹಮಂತ್ರಿಯಾದ ಪಟೇಲರು ಯಶಸ್ವಿಯಾದರು. ಅವರ ಶ್ರಮ ಮತ್ತು ತ್ಯಾಗ ಭಾರತದ ಸಮಗ್ರತೆಗೆ ಕೊಡುಗೆಯಾಯಿತು. ಆದ್ದರಿಂದ ಅಕ್ಟೋಬರ್ ೩೧ ನ್ನು ಏಕತಾ ದಿವಸ ಅಥವಾ ರಾಷ್ಟಿçÃಯ ಸಮಗ್ರತಾ ದಿನ ಎಂದು ಗೌರವಪೂರ್ವಕ ಆಚರಿಸಲಾಗುವುದು.

೨೦೧೪ ರಿಂದ ತೊಡಗಿದ ಈ ಅರ್ಥಪೂರ್ಣ ಆಚರಣೆಗೆ ಭಾರತೀಯರೆನಿಸಿಕೊಂಡ ನಾವೆಲ್ಲರೂ ಬದ್ಧರಾಗಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಈಗ ಕೊಂಚ ಅಳುಕಬೇಕಾಗುತ್ತದೆ. ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರ. ಹೊರಗಿನ ಲೋಕದಲ್ಲಿ ಗುರುತಿಸಿಕೊಂಡರೆ ಸಾಲದು. ಆಂತರ್ಯದಲ್ಲಿ ಸ್ಪಷ್ಟ ಚಿತ್ರಣವಿರಬೇಕು. ರಾಷ್ಟçಮಟ್ಟದ ವಿಚಾರಗಳು ಹಾಗಿರಲಿ ನಮ್ಮ ಕುಟುಂಬ, ಪರಿಸರ, ಸಮಾಜದ ಪರಿಧಿಗೆ ಒಳಪಡುವ ವಿಭಿನ್ನತೆಗಳಿಗೆ ನಮ್ಮ ಪ್ರತಿಕ್ರಿಯೆ ಹೇಗಿದೆ? ಆಲೋಚಿಸೋಣ. ಸದಾ ಅಸಹನೆ, ಅಸಹಕಾರ, ಘರ್ಷಣೆ, ಮಾನಸಿಕ ತುಮುಲ, ಒತ್ತಡ, ಅಶಾಂತಿಯುತ ಬದುಕು ಇವೇ ತಾನೇ ನಮ್ಮ ಬದುಕಿನ ಶೈಲಿ?! ಹಾಗಿರುವಲ್ಲಿ ಅಕ್ಷರಗಳಲ್ಲಿ ರಾರಾಜಿಸಿದ ಬಾಂಧವ್ಯ ನೈಜ ಬದುಕಿಗೆ ಏಕೆ ನಿಲುಕುವುದಿಲ್ಲ? ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಹೊರಗಿನ ಧಾಳಿ, ಧಂಗೆಗಳು, ಘರ್ಷಣೆಗಳು ಉಳಿಪೆಟ್ಟಿನಂತೆ ಭಾರತಕ್ಕೆ ಒಂದು ರೂಪವನ್ನು ನೀಡುತ್ತಲೇ ಹೋಯಿತು. ಆದರೂ ಮುಕ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಅದೇಕೋ ಹಿಂದುಳಿಯಿತು. ಅಧಿಕಾರದ ಆಸೆ, ಸ್ವಾರ್ಥಪರ ಚಿಂತನೆ ದೇಶಭಕ್ತ ನಾಯಕರ ಬಲಿದಾನಕ್ಕೂ ಕಾರಣವಾಯಿತು. ಆದರೂ ಸಮಸ್ಯೆಗಳು ಇಂದಿಗೂ ಸಮಸ್ಯೆಯಾಗಿಯೇ ಉಳಿದಿವೆ.

ಜಗತ್ತಿನ ಪ್ರತಿ ಸೃಷ್ಟಿಯಲ್ಲಿ ವೈವಿಧ್ಯತೆ ಅಡಗಿದೆ. ಸವಾಲುಗಳ ಮಧ್ಯೆ ಸಮಗ್ರತೆಯನ್ನು ಕಾದುಕೊಳ್ಳುವುದೇ ನಿಜವಾದ ಯಶಸ್ಸು. ವಿಜ್ಞಾನ-ತಂತ್ರಜ್ಞಾನ, ಆಧುನೀಕರಣ, ಜಾಗತೀಕರಣ ಗಳೆಲ್ಲವೂ ಲೌಕಿಕ ಜೀವನದ ಸುಲಭ ಸಾಧ್ಯತೆಗಾಗಿ. ಹಾಗೆಯೇ ನೈತಿಕತೆ, ಮೌಲಿಕತೆಗಳು ಮನುಷ್ಯನ ಗುಣ ಸ್ವಭಾವ ದೋಷಗಳ ತಿದ್ದುವಿಕೆಗೆ ಬೇಕಾದ ಅಸ್ತçಗಳು. ಇವೆರಡರ ಸಮನ್ವಯವೇ ನಮ್ಮ ಭಾರತೀಯ ಶಿಕ್ಷಣದ ಮೂಲ ಉದ್ದೇಶವಾಗಬೇಕು. ಅವಿಭಕ್ತ ಕುಟುಂಬ ವ್ಯವಸ್ಥೆ ಇದರ ಮೊದಲ ಹೆಜ್ಜೆಯಾಗಿತ್ತು. ಅದರ ವಿಘಟನೆಯಾದ ಬಳಿಕ ಮನಸ್ಸುಗಳ ಒಡಕಿಗೂ ಕಾರಣವಾಗಿವೆ. ಹೀಗಿರುವಾಗ ಏಕತಾ ದಿವಸದ ಆಚರಣೆ ಹೇಗೆ ಸಂಪನ್ನಗೊಳ್ಳಲು ಸಾಧ್ಯ? ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನೀತಿ ತತ್ತ÷್ವದ ಅನುಷ್ಠಾನವಾಗಬೇಕು. ತಾನು, ತನ್ನದು ಎಂಬ ಅತಿಸ್ವಾರ್ಥಕ್ಕೆ ನಮ್ಮ ಮನಸ್ಸನ್ನು ಬಲಿಗೊಡಬಾರದು. ಜಗತ್ತನ್ನೇ ಬುಡಮೇಲು ಮಾಡುವ ಸಾಂಕ್ರಾಮಿಕ ಖಾಯಿಲೆಗಳು, ಪ್ರಕೃತಿ ವಿಕೋಪಗಳು ಮನುಷ್ಯನ ಮುಖವಾಡಗಳನ್ನು ಕಳಚಿ ನೈಜ ಜೀವನದ ದರ್ಶನ ಮಾಡಿಸುತ್ತಿವೆ. ಎಲ್ಲೋ ಹುಟ್ಟಿದ ಸಮಸ್ಯೆಗಳಿಗೆ ಇನ್ನೆಲ್ಲೋ ಪರಿಹಾರ! ಒಬ್ಬರಿಗೊಬ್ಬರು ತಮ್ಮ ಕೈಗಳನ್ನು ಸರಪಣಿಯಂತೆ ಬೆಸೆಯುತ್ತ ಕಷ್ಟ ಸುಖಗಳಿಗೆ ಹೆಗಲುಕೊಡುವ ದಯಾಮಯ ಗುಣ ಈಗ ಅಗತ್ಯವಾಗಿ ಬೇಕಾಗಿದೆ . ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸ ಸಹಜ. ಈ ಸತ್ಯವನ್ನು ಒಪ್ಪೋಣ. ಪ್ರತಿಯೊಬ್ಬ ಭಾರತೀಯ ಇದನ್ನು ಅರ್ಥ ಮಾಡಿ ಕೊಂಡು ಏಕತಾ ತತ್ತ÷್ವಕ್ಕೆ ಪೂರಕವಾಗಿ ನಡೆದು ಕೊಂಡರೆ ನಾವು ನಮ್ಮ ಗುರಿ ಸಾಧಿಸಿದಂತೆಯೇ.

-ಪ್ರತಿಮಾ ಹರೀಶ್ ರೈ, ಉಪನ್ಯಾಸಕರು,

ಸೈಂಟ್ ಆನ್ಸ್ ಕಾಲೇಜು,

ವೀರಾಜಪೇಟೆ.