ಗೋಣಿಕೊಪ್ಪಲು, ಅ. ೩೦: ಹಸು ಮೇಯಿಸಲು ತೆರಳಿದ್ದ ಅಮ್ಮ, ಮಗ ಇಬ್ಬರೂ ನಾಪತ್ತೆಯಾಗಿದ್ದು, ಆಕಸ್ಮಿಕವಾಗಿ ಹೊಳೆಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ವತಃ ಆಕೆಯ ಪತಿ ಪ್ರಕಾಶ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ದ.ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ ಪ್ರಕಾಶ್ ಎಂಬವರ ಪತ್ನಿ ರೇವತಿ ಅಲಿಯಾಸ್ ರೇಖಾ (೩೨) ಹಾಗೂ ಮಗ ಕಾರ್ಯಪ್ಪ (೧೨) ಶನಿವಾರ ಬೆಳಿಗ್ಗೆ ೧೧ರ ವೇಳೆ ಸಮೀಪದ ಲಕ್ಷö್ಮಣತೀರ್ಥ ನದಿ ತೀರದ ದಂಡೆಯಲ್ಲಿ ತಮ್ಮ ಹಸುವನ್ನು ಮೇಯಿಸಲು ತೆರಳಿದ್ದರು.

ಈ ವೇಳೆ ಹಸುವು ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಓಡುತ್ತಿದ್ದುದನ್ನು ಕಂಡು ಕಾರ್ಯಪ್ಪ ಅದರ ಹಿಂದೆಯೆ ಓಡಿ ಹಸುವನ್ನು ಹಿಡಿಯುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಹೊಳೆಯ ಬದಿಯಲ್ಲಿ ಮರಳು ತೆಗೆದ ದೊಡ್ಡ ಗುಂಡಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಮಗನನ್ನು ರಕ್ಷಿಸಲು ತೆರಳಿದ ತಾಯಿ ಕೂಡ ಹೊಳೆಯಲ್ಲಿ ತೇಲಿ ಹೋಗಿರಬಹುದು ಎಂದು ಹೇಳಲಾಗಿದೆ. ಅಮ್ಮ ಹಾಗೂ ಮಗ ಹಸುವನ್ನು ಮೇಯಿಸುತ್ತಿದ್ದುದನ್ನು ಸ್ಥಳೀಯರು ನೋಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಲಸ ನಿಮಿತ್ತ ಮನೆಯಿಂದ ಹೊರ ಹೋಗಿದ್ದ ಪ್ರಕಾಶ್ ಮಧ್ಯಾಹ್ನ ೧-೩೦ ಸುಮಾರಿಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ತನ್ನ ಪತ್ನಿ ಹಾಗೂ ಮಗ ಇರಲಿಲ್ಲ. ಈ ಬಗ್ಗೆ ಸಮೀಪದವರನ್ನು ವಿಚಾರಣೆ ಮಾಡಿದ ವೇಳೆ ಹಸುವಿನೊಂದಿಗೆ ಇಬ್ಬರು ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.

ಕೂಡಲೇ ಹೊಳೆ ಬದಿಯಲ್ಲಿ ನೋಡಿ ಪರಿಶೀಲನೆ ನಡೆಸಿದಾಗ ಮಗ ಕಾರ್ಯಪ್ಪ ಧರಿಸುತ್ತಿದ್ದ ಚಪ್ಪಲಿ ಹೊಳೆಯ

(ಮೊದಲ ಪುಟದಿಂದ) ದಂಡೆಯಲ್ಲಿ ಪತ್ತೆಯಾಗಿದೆ. ಗಾಬರಿಗೊಂಡ ಪ್ರಕಾಶ್ ಅಕ್ಕಪಕ್ಕದ ಜನರಿಗೆ ಸುದ್ದಿ ತಿಳಿಸಿ ಎಲ್ಲ್ಲರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ ವೇಳೆ ಸಮೀಪದ ಗುಂಡಿಯಲ್ಲಿ ಪತ್ನಿ ರೇಖಾಳ ಚಪ್ಪಲಿಯೂ ಲಭ್ಯವಾಗಿವೆ.

ಸಂಜೆಯ ತನಕ ಸ್ಥಳೀಯರ ಹಾಗೂ ಶ್ರೀಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಕಾರದಿಂದ ಇಬ್ಬರಿಗಾಗಿ ಹುಡುಕಾಟ ನಡೆಸಿದÀರೂ ಯಾವುದೇ ಪ್ರಯೋಜನವಾಗಲಿಲ್ಲ.

ಕತ್ತಲು ಆವರಿಸಿದ ಕಾರಣ ಪೊಲೀಸರು ಭಾನುವಾರ ಮುಳುಗು ತಜ್ಞರ ಸಹಕಾರ ಪಡೆದು ಹುಡುಕಾಟ ನಡೆಸುವ ಭರವಸೆ ನೀಡಿದ್ದಾರೆ.

ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ಯಪ್ಪ ಶಾಲೆಗೆ ರಜೆಯಿದ್ದ ಕಾರಣ ತನ್ನ ಅಮ್ಮ ನೊಂದಿಗೆ ಹಸುವನ್ನು ಮೇಯಿಸಲು ತೆರಳಿದ್ದ ಎಂದು ಪ್ರಕಾಶ್ ಖಚಿತ ಪಡಿಸಿದ್ದಾರೆ. ಭಾನುವಾರ (ಇಂದು) ಪೊಲೀಸರ ಸಮ್ಮುಖದಲ್ಲಿ ಶೋಧ ಕಾರ್ಯ ನಡೆಯಲಿದೆ.

- ಹೆಚ್.ಕೆ.ಜಗದೀಶ್