ಎಂತಹ ಹೆಮ್ಮೆಯ ನಾಡು ನಮ್ಮಯ ಕನ್ನಡ ನಾಡು. ಕನ್ನಡ ನಾಡಿನ ಜನತೆ ಮರೆಯಲಾರದ ಈ ಸುದಿನ. ಕನ್ನಡ ನಾಡು ಏಕೀಕರಣಗೊಂಡ ದಿನ. ನಮ್ಮ ಭಾಷೆ ಕನ್ನಡ, ಏನೇ ಕಲಿತರೂ, ಕನ್ನಡ ನಾಡಿನ ನಾವುಗಳು ಕನ್ನಡ ಕಲಿಯಲೇಬೇಕು. ಅದು ನಮ್ಮ ಎದೆಯಾಳದ ಮಾತು. ನಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಕನ್ನಡ ಭಾಷೆಗೆ ಮಾತ್ರ ಸಾಧ್ಯ.
ರಾಜ್ಯೋತ್ಸವದ ಸಂಭ್ರಮವನ್ನು ವಿದೇಶದಲ್ಲಿರುವ ಕನ್ನಡಿಗರು ಹೆಮ್ಮೆಯಿಂದ ಆಚರಿಸುವರು. ಕನ್ನಡಿಗರಿಗೆ ರಾಜ್ಯೋತ್ಸವ ಒಂದು ಸಂಭ್ರಮದ ಹಬ್ಬ. ಕನ್ನಡದ ಮೂಲಕ ನಿತ್ಯ ಬದುಕನ್ನು ನೋಡುವುದೇ ಕನ್ನಡತನ. ಕನ್ನಡವೇ ನಮ್ಮ ಮಾತೃಭಾಷೆ. ನಾವು ಇಂಗ್ಲೀಷ್, ಹಿಂದಿ ಏನೇ ಕಲಿತರೂ, ಕನ್ನಡಿಗರಿಗೆ ಕನ್ನಡವೇ ಮನೆಮಾತು. ಕನ್ನಡವೇ ನಮ್ಮುಸಿರು. ವಿದೇಶಗಳಲ್ಲೂ ಕನ್ನಡಿಗರು ಕನ್ನಡ ಸಂಘಟನೆಗಳನ್ನು ಕಟ್ಟಿಕೊಂಡಿರುವರು. ಕನ್ನಡಿಗರ ಆಚಾರ, ವಿಚಾರ, ಹಬ್ಬಗಳನ್ನು ಆಚರಿಸುವರು. ಕನ್ನಡ ಬಳಗ ಅಮೇರಿಕಾದ ‘ಅಕ್ಕ ಬಳಗ’ ಕನ್ನಡ ನಾಡು, ನುಡಿಗಾಗಿ ಶ್ರಮಿಸುತ್ತಿರುವರು. ಕನ್ನಡ ನಾಡು ನುಡಿಗಾಗಿ ಹಲವಾರು ಕವಿಗಳು ನಾಡಗೀತೆಗಳನ್ನು ರಚಿಸಿ, ಕನ್ನಡದ ಹಿರಿಮೆಯನ್ನು ಸಾರಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ’ ಈ ಹಾಡನ್ನು ಕೇಳದವರೇ ವಿರಳ.
ಇಂಗ್ಲೀಷ್ ಭಾಷೆಯ ಜೊತೆಗೆ ಬೇರೆ ಪ್ರಾದೇಶಿಕ ಭಾಷೆಗಳ ಒಡನಾಟದಿಂದ ಸೃಜನ ಶೀಲತೆಯನ್ನು ರೂಪಿಸಿಕೊಳ್ಳುವುದೇ ಕನ್ನಡತನ. ಯಾವುದೇ ವೃತ್ತಿಯಾಗಿರಲಿ, ಕನ್ನಡ ನಮ್ಮ ಮನದಾಳದ ಭಾಷೆಯಾಗಿ ಉಳಿಯಬೇಕು. ಕನ್ನಡ ಮೊದಲು ಹಲ್ಮಿಡಿ ಶಾಸನದಲ್ಲಿ ಮೊಳಕೆಯೊಡೆಯಿತು. ಅಂತಹ ಕನ್ನಡ ಭಾಷೆ ಕನ್ನಡಿಗರ ಉಸಿರಾಗಿದೆ. ಅಂತಹ ಭಾಷೆಯನ್ನು ಉಸಿರಿನೊಡನೆ ಹಸಿರಾಗಿಸಿಕೊಳ್ಳಬೇಕಾದುದು ಕನ್ನಡಿಗರೆಲ್ಲರ ಕರ್ತವ್ಯ.
ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಿದರೆ ಸಾಲದು, ಭಾಷೆಯನ್ನು ಉಳಿಸಿ ಬೆಳೆಸಬೇಕಾದುದು ಕನ್ನಡಗರಾದ ನಮ್ಮೆಲ್ಲರ ಕರ್ತವ್ಯ. ಆಚಾರ, ವಿಚಾರಗಳಲ್ಲೂ ಅದನ್ನು ಅಳವಡಿಸಿಕೊಳ್ಳಬೇಕು ಮತ್ತು ಗೌರವಿಸಬೇಕು. ಮಕ್ಕಳಿಗೆ ಮೊದಲು ಮಾತೃಭಾಷೆಯನ್ನು ಕಲಿಸಬೇಕು. ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ. ಹೆತ್ತವರೇ ಮೊದಲ ಗುರು. ಆದುದರಿಂದ ಮಕ್ಕಳಿಗೆ ತಾಯಂದಿರು ಮೊದಲು ಮಾತೃಭಾಷೆಯನ್ನು ಕಲಿಸಬೇಕು. ಮಹಾಭಾರತ ಮತ್ತು ರಾಮಾಯಣದ ಶ್ರೇಷ್ಟ ಗ್ರಂಥಗಳಿAದ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಿಳಿಸಬೇಕು. ನಮ್ಮ ಮಾತೃಭಾಷೆ ಮರೆತರೆ ನಮ್ಮ ಅಸ್ಥಿತ್ವವನ್ನೇ ಮರೆತಂತೆ. ರಾಜ್ಯೋತ್ಸವವನ್ನು ಮನಶುದ್ಧಿಯಾಗಿ ನುಡಿದರೆ ಮಾತ್ರ ಕನ್ನಡ ನಾಡಿನ ಏಳಿಗೆ ಮತ್ತು ಪ್ರಗತಿ ಸಾಧ್ಯ.
ಪ್ರತೀ ಜನಾಂಗಕ್ಕೆ ಅವರದೇ ಆದ ಮಾತೃಭಾಷೆ ಇದೆ. ಸಂಸ್ಕೃತಿ ಭಾಷೆಯ ಅಂತರAಗ. ಭಾಷೆ ಅದರ ಬೆನ್ನೆಲುಬು. ಹಾಗೇ ಕರ್ನಾಟಕಕ್ಕೊಂದು ಭಾಷೆ, ಶಿಕ್ಷಣ, ಆಡಳಿತ ವ್ಯವಹಾರಗಳಲ್ಲಿ ಕನ್ನಡವೇ ನಡೆಯಬೇಕೆಂದು ಬಯಸುವುದು ಸಹಜ. ಅದು ಅಗತ್ಯವೂ ಕೂಡ. ಎಲ್ಲರಲ್ಲೂ ನಾಡು ನುಡಿಯ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿರಬೇಕು. ನಮ್ಮ ದೇಶ ನಮ್ಮ ಭಾಷೆ, ಜಲ, ನೆಲ, ಸಂಸೃತಿ, ಆಚಾರ, ವಿಚಾರಗಳೆಲ್ಲವೂ ಪವಿತ್ರವಾದುದು. ದೇಶಪ್ರೇಮದೊಂದಿಗೆ, ಭಾಷಾ ಪ್ರೇಮವೂ ಇರಬೇಕು.
ಇಂಗ್ಲೀಷ್ ಬೇಡವೆಂದು ಹೇಳಲಾಗದು. ಪ್ರಪಂಚ ಜ್ಞಾನಕ್ಕೆ ಅದು ಅಗತ್ಯ. ಅದನ್ನು ಮರೆಯಲಾದರು. ಇಂಗ್ಲೀಷನ್ನು ಭಾಷೆಯಾಗಿ ಕಲಿತು, ಚಿಕ್ಕ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಅವರು ದೊಡ್ಡವರಾದಾಗ ಆಂಗ್ಲ ಭಾಷೆಯನ್ನು ಕಲಿತೇ ಕಲಿಯುವರು. ಮಾತೃಭಾಷೆ ಕಲಿಯದವರಿಗೆ ಬೇರೆ ಭಾಷೆ ಮನನವಾಗದು. ಕನ್ನಡಾಂಬೆಯ ಸಂಪತ್ತಿಗೆ ಸಾಟಿಇಲ್ಲ. ಪರಭಾಷೆಯ ಮೋಹಕ್ಕೊಳಗಾಗಿ ನಮ್ಮತನ ಮರೆಯದಿರಿ.
- ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ, ಟಿ. ಶೆಟ್ಟಿಗೇರಿ.