ಶ್ರೀಮAಗಲ, ಅ. ೨೮: ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಯುನೈಟೆಡ್ ಕೊಡವ ಆರ್ಗನೈಸೇಷನ್ -ಯುಕೊ ನಡೆಸುತ್ತಿರುವ ಹೋರಾಟಕ್ಕೆ ಟಿ. ಶೆಟ್ಟಿಗೇರಿಯ ತಾಳೇರಿ ಮೂಂದ್' ನಾಡ್ ಕೊಡವ ಸಮಾಜ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಕೊಡವರಿಗೆ ಪ್ರತ್ಯೇಕ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಹೋರಾಟ ನಡೆಸುತ್ತಿರುವ ಯುಕೊ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಟಿ. ಶೆಟ್ಟಿಗೇರಿಯ ತಾಳೇರಿ ಮೂಂದ್' ನಾಡ್ ಕೊಡವ ಸಮಾಜದ ಆಡಳಿತ ಮಂಡಳಿಯನ್ನು ಭೇಟಿಯಾಗಿ ಮಾತುಕತೆ ನಡೆಸಿ ಯುಕೊ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಈ ಕುರಿತಂತೆ ನಡೆದ ಸಭೆಯ ನಂತರ ಮಾತನಾಡಿದ ತಾಳೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ ಯುಕೊ ಸಂಘಟನೆ ಕೊಡವ ಅಭಿವೃದ್ಧಿ ನಿಗಮ ಬೇಡಿಕೆ ಮುಂದಿಟ್ಟಿರುವುದು ಇಂದಿನ ಪರಿಸ್ಥಿತಿಗೆ ಸಮಯೋಚಿತ ನಿರ್ಧಾರವಾಗಿದ್ದು, ಕೊಡವರ ಬೇಡಿಕೆಗಳನ್ನು ಈಡೇರಿ ಸಲು ಸರ್ಕಾರಕ್ಕೆ ಇದು ಸಕಾಲವಾಗಿದೆ. ಸರ್ಕಾರದ ಯಾವುದೇ ಸವಲತ್ತುಗಳು ಇದುವರೆಗೆ ಕೊಡವರನ್ನು ತಲುಪುವಲ್ಲಿ ವಿಫವಾಗಿರುವ ಹಿನ್ನಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಕೊಡವರಿಗೆ ಯಾವುದೇ ಮೀಸಲಾತಿ ಸ್ಥಾನಮಾನ ಗಳೂ ಇಲ್ಲ. ಈ ಹಿನ್ನೆಲೆ ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಯಾದರೆ ಕೊಡವ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನಾನಾ ಆಯಾಮಗಳಲ್ಲಿ ಸಹಕಾರಿಯಾಗಲಿವೆೆ ಎಂದರು.
ಯುಕೊ ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ಅಭಿವೃದ್ಧಿ ನಿಗಮ ಜನಾಂಗಕ್ಕೆ ಅನಿವಾರ್ಯವಾಗಿದೆ. ಇದರಿಂದ ಹಲವು ಪ್ರಯೋಜನಗಳಿವೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ, ತಾಳೇರಿ ಮೂಂದ್ ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಮಾಣೀರ ವಿಜಯ ನಂಜಪ್ಪ, ಕಾರ್ಯದರ್ಶಿ ಮನ್ನೇರ ರಮೇಶ್, ಆಡಳಿತ ಮಂಡಳಿ ಸದಸ್ಯರುಗಳಾದ ಕೈಬುಲಿರ ಹರೀಶ್ ಅಪ್ಪಯ್ಯ, ಕಟ್ಟೇರ ಈಶ್ವರ, ಆಂಡಮಾಡ ಸತೀಶ್ ಹಾಗೂ ಯುಕೊ ಸದಸ್ಯರುಗಳಾದ ಮಚ್ಚಾಮಾಡ ಅನಿಶ್ ಮಾದಪ್ಪ, ಅರುಣ ಸೋಮಯ್ಯ ಉಪಸ್ಥಿತರಿದ್ದರು.