ಮಡಿಕೇರಿ, ಅ. ೨೯: ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ರಾಜ್ಯೋತ್ಸವ ಹಾಗೂ ದೀಪಾವಳಿ ಕೊಡುಗೆಯಾಗಿ ರಾಜ್ಯ ಸರಕಾರದಿಂದ ಶೇ. ೩ ತುಟ್ಟಿಭತ್ಯೆ ಬಿಡುಗಡೆಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಬಾಕಿ ಇದ್ದ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕೊಡುಗೆಯಾಗಿ ಶೇ. ೩ ತುಟ್ಟಿಭತ್ಯೆಯನ್ನು ತಾ. ೧.೭.೨೦೨೧ ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಸಂಘವು ಮನವಿ ಸಲ್ಲಿಸಿದ ಕೇವಲ ೨೪ ಗಂಟೆಯೊಳಗಾಗಿ ಹಾಗೂ ಕೇಂದ್ರ ಸರಕಾರ ಮಂಜೂರು ಮಾಡಿದ ತುಟ್ಟಿಭತ್ಯೆಗೆ ಸರಿಸಮಾನವಾಗಿ ತುಟ್ಟಿಭತ್ಯೆಯನ್ನು ಮಂಜೂರು ಮಾಡಿರುವ ಮುಖ್ಯ ಮಂತ್ರಿಗಳನ್ನು ರಾಜ್ಯ ಸರಕಾರಿ ನೌಕರರ ಪರವಾಗಿ ಸಂಘವು ಅಭಿನಂದಿ ಸುವುದಾಗಿ ಸಂಘದ ಕೊಡಗು ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ತಿಳಿಸಿದ್ದಾರೆ.