ಗೋಣಿಕೊಪ್ಪ ವರದಿ, ಅ. ೨೯: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೫ ಲಕ್ಷ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಸ ವಿಲೇವಾರಿ ಘಟಕಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕೇರ ಸೂರ್ಯ ಅಯ್ಯಪ್ಪ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಭೂಮಂಡಲಕ್ಕೆ ಆಗುತ್ತಿರುವ ಪ್ರತಿಕೂಲ ಪರಿಣಾಮವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಜೀವಜಂತುಗಳ ಜೀವಕ್ಕೆ ಕಂಟಕವಾಗುವ ಮುನ್ನ ಕಸ ನಿರ್ವಹಣೆಗೆ ಒತ್ತು ನೀಡಬೇಕಾದ ಜವಾಬ್ದಾರಿ ಇದೆ. ಕಸ ವಿಲೇವಾರಿಗೆ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ಘಟಕ ನಿರ್ಮಿಸಲಾಗುತ್ತಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷೆ ಪಡಿಞರಂಡ ಕವಿತ ಪ್ರಭು, ಸದಸ್ಯ ಕಾಟಿಮಾಡ ಶರಿನ್ ಮುತ್ತಣ್ಣ, ಅಳಮೇಂಗಡ ಪವಿತ, ಪಿಡಿಒ ಮನಮೋಹನ್ ಇದ್ದರು.